ಗೋಮಾತೆ ಬಗ್ಗೆ ಮಾತಾಡ್ತಾರೆ, ಆದ್ರೆ ಇವರ್ಯಾರಾದ್ರು ಸಗಣಿ ಎತ್ತಿದ್ದಾರಾ?: ಸಿದ್ದರಾಮಯ್ಯ
ಕೆಲವರು ಸ್ವಾರ್ಥ ರಾಜಕಾರಣಕ್ಕಾಗಿ ಗೋಮಾತೆ ಹೆಸರು ಹೇಳಿ ಜನರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ನಿಜ ಹೇಳಬೇಕೆಂದರೆ ಅವರಿಗೆ ಗೋವಿನ ಬಗ್ಗೆ ನೈಜ ಕಾಳಜಿಯಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಹೂವಿನಹಡಗಲಿ: ಗೊರಕ್ಷಣೆ, ಗೋಮಾತೆ, ಹಿಂದುತ್ವದ ಬಗ್ಗೆ ಮಾತನಾಡುವವರೆಲ್ಲ ಸಗಣಿ ಎತ್ತಿದ್ದಾರೆಯೇ? ಎಂದು ಮಾಜಿ ಮುಖ್ಯಮಂತ್ರಿ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರಶ್ನಿಸಿದರು.
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಪಶ್ಚಿಮ ಕಾಲುವೆ ಗ್ರಾಮದಲ್ಲಿ ನಡೆದ ಶ್ರೀ ಬೀರಲಿಂಗೇಶ್ವರ ದೇವಾಲಯದ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದುವರೆಗೂ ಸಾಕಷ್ಟು ಮಂದಿ ಗೋಮಾತೆ, ಗೋರಕ್ಷಣೆ ವಿಚಾರವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಗೋಮಾತೆಯ ನಿಜವಾದ ಸೇವಕರು ರೈತರು. ರೈತರಾದ ನೀವು ಬರೀ ಸಗಣಿ ಮಾತ್ರ ಎತ್ತುತ್ತಿದ್ದೀರಿ. ಆದರೆ, ಗೋಮಾತೆ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿರುವವರು ತುಪ್ಪ ತಿನ್ನುತ್ತಿದ್ದಾರೆ ಎಂದು ಹೇಳಿದರು.
ಕೆಲವರು ಸ್ವಾರ್ಥ ರಾಜಕಾರಣಕ್ಕಾಗಿ ಗೋಮಾತೆ ಹೆಸರು ಹೇಳಿ ಜನರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ನಿಜ ಹೇಳಬೇಕೆಂದರೆ ಅವರಿಗೆ ಗೋವಿನ ಬಗ್ಗೆ ನೈಜ ಕಾಳಜಿಯಿಲ್ಲ ಎಂದು ಕಿಡಿಕಾರಿದ ಸಿದ್ದರಾಮಯ್ಯ, ನಮ್ಮ ಸರ್ಕಾರ ಬರೀ ಬಡವರ ಪರ, ಶೋಷಿತರ ಪರ ಯೋಜನೆಗಳನ್ನು ರೂಪಿಸಿತ್ತು. ನಾನು ಒಳ್ಳೆಯ ಕೆಲಸ ಮಾಡಿದ್ದಕ್ಕಾಗಿ ಎಲ್ಲರೂ ಸೇರಿ ಹೊಟ್ಟೆ ಕಿಚ್ಚಿನಿಂದ ನನ್ನನ್ನು ಮತ್ತೊಮ್ಮೆ ಮುಖ್ಯಮಂತ್ರಿ ಆಗದಂತೆ ತಡೆದರು ಎಂದು ಆರೋಪಿಸಿದರು.
ಕಾಗಿನೆಲೆ ಕನಕಪೀಠದ ನಿಂಜನಾನಂದಪುರಿ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಆರ್.ಶಂಕರ್, ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.