ಬೆಂಗಳೂರು: ಈ ಹಿಂದೆಯೂ ಕೂಡ ನನಗೆ ಸವಾಲು ಹಾಕಿದ್ದರಿಂದ ಜನಾರ್ಧನ ರೆಡ್ಡಿ ಅವರು ಜೈಲಿಗೆ ಹೋಗಬೇಕಾಯಿತು. ಈಗ ಮತ್ತೆ ಆಧಾರರಹಿತ ಆರೋಪಗಳನ್ನು ಮಾಡುತ್ತಾ ನಮ್ಮನ್ನು ಕೆಣಕಲು ಬಂದರೆ ಬೇಲ್ ರದ್ದಾಗಿ ಮತ್ತೆ ಜೈಲಿಗೆ ಹೋಗಬೇಕಾದೀತು ಎಂದು ಮಾಜಿ ಮುಖ್ಯ್ಮ್ನತ್ರಿ ಹಾಗೂ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಲೋಕಾಯುಕ್ತ ಸಂತೋಷ್ ಹೆಗ್ಡೆ ವರದಿಯ ಮೇಲೆ ಸದನದಲ್ಲಿ ಚರ್ಚೆ ನಡೆದಿದ್ದಾಗ ತಾಕತ್ತಿದ್ದರೆ ಬಳ್ಳಾರಿಗೆ ಬರುವಂತೆ ಜನಾರ್ದನ ರೆಡ್ಡಿ ನನಗೆ ಸವಾಲು ಹಾಕಿದ್ದರು. ಆ ಸವಾಲನ್ನು ಸ್ವೀಕರಿಸಿ ಬೆಂಗಳೂರಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆ. ಆ ದಿನದಿಂದಲೇ ರೆಡ್ಡಿ ಗ್ಯಾಂಗ್ ಕಟ್ಟಿದ್ದ ಬಳ್ಳಾರಿ ರಿಪಬ್ಲಿಕ್ ಕುಸಿಯಲಾರಂಭಿಸಿತ್ತು. ಅದರ ನಂತರ ಜನಾರ್ದನ ರೆಡ್ಡಿ ಜೈಲುಪಾಲಾಗಿ ಹೋದರು. ನಮ್ಮನ್ನು ಮತ್ತೆ ಕೆಣಕಲು ಬರಬೇಡಿ, ಬೇಲ್ ರದ್ದಾಗಿ ಮತ್ತೆ ಜೈಲಿಗೆ ಹೋಗಬೇಕಾದೀತು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. 



ಮುಂದುವರೆದು ಹೇಳಿರುವ ಅವರು, ಜನಾರ್ಧನ ರೆಡ್ಡಿ ಅವರು ಅಕ್ರಮ ಗಣಿಗಾರಿಕೆ ಮಾಡಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಚಿನ್ನದ ಕಮೋಡ್, ಚಿನ್ನದ ಕುರ್ಚಿ ಇವೆಲ್ಲ ಜನಾರ್ಧನ ರೆಡ್ಡಿಯವರ ವೈಭವದ ಜೀವನಕ್ಕೆ ಸಾಕ್ಷಿಗಳು. ಇಷ್ಟೆಲ್ಲ ಎಲ್ಲಿಂದ ಬಂತು? ಇವರೇನು ಸಾಮ್ರಾಟ ವಂಶಸ್ಥರೇ? ಈ‌ ಸಂಪತ್ತು ಗಣಿಲೂಟಿಯ ಸಂಪಾದನೆ ಎನ್ನುವುದು ಬಳ್ಳಾರಿ ಮಾತ್ರವಲ್ಲ‌ ಇಡೀ ದೇಶಕ್ಕೆ ಗೊತ್ತು. ಇಷ್ಟಾದ ಮೇಲೆಯೂ ತಮ್ಮನ್ನು ಪ್ರಾಮಾಣಿಕರೆಂದು ಹೇಳಿಕೊಳ್ಳಲು ನಾಚಿಕೆಯಾಗುವುದಿಲ್ವೇ? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.


ಬಳ್ಳಾರಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ತಮ್ಮ ಸ್ನೇಹಿತ ಹಾಗೂ ಶಾಸಕ ಬಿ.ಶ್ರೀರಾಮುಲು ಜೊತೆ ಪ್ರಚಾರಕ್ಕೆ ಮುಂದಾಗಿರುವ ಜನಾರ್ಧನ್ ರೆಡ್ಡಿ, ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ಸಿದ್ದರಾಮಯ್ಯ ಅವರು ಅಕ್ರಮ ಗಣಿಗಾರಿಕೆ ನೆಪದಲ್ಲಿ ಬಳ್ಳಾರಿಗೆ ಪಾದಯಾತ್ರೆ ನಡೆಸಿ ನನ್ನ ಮೇಲೆ ಸುಳ್ಳು ಆರೋಪ ಮಾಡಿ ನನ್ನನ್ನು ನಾಲ್ಕು ವರ್ಷ ಜೈಲಿಗೆ ಕಳುಹಿಸಿದರು ಎಂದು ಆರೋಪಿಸಿದ್ದರು.