ಸಿದ್ದರಾಮಯ್ಯ ಕಾಂಗ್ರೆಸ್`ಗೆ ಅನಿವಾರ್ಯವಾಗಿದ್ದರು, ಆದರೆ ನಮಗೇನಲ್ಲ- ಹೆಚ್.ಡಿ.ದೇವೇಗೌಡ
ಬೆಂಗಳೂರಿನ ಪದ್ಮನಾಭ ನಗರದ ಅಮೋಘ ನಿವಾಸದಲ್ಲಿ ರಾಜ್ಯದ ಜನತೆಗೆ ಸಂಕ್ರಾಂತಿ ಹಬ್ಬದ ಶುಭಕೋರಿದ- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ.
ಬೆಂಗಳೂರು: ನಗರದ ಪದ್ಮನಾಭ ನಗರದ ಅಮೋಘ ನಿವಾಸದಲ್ಲಿ ಆನಂದ್ ಅಸ್ನೋಟಿಕರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿ, ರಾಜ್ಯದ ಜನತೆಗೆ ಶುಭಾಶಯ ಕೋರಿದ ಜೆಡಿಎಸ್ ರಾಷ್ಟ್ರಾಧ್ಯಕ್ಷ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸಿದ್ದರಾಮಯ್ಯ ಕಾಂಗ್ರೆಸ್'ಗೆ ಅನಿವಾರ್ಯವಾಗಿದ್ದರು, ಆದರೆ ನಮಗೇನಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಪದ್ಮನಾಭ ನಗರದ ಅಮೋಘ ನಿವಾಸದಲ್ಲಿ ರಾಜ್ಯದ ಜನತೆಗೆ ಸಂಕ್ರಾಂತಿ ಹಬ್ಬದ ಶುಭಕೋರಿದ ಹೆಚ್ಡಿಡಿ, ಸಂಕ್ರಾಂತಿ ಶುಭದಿನ ಆನಂದ್ ಅಸ್ನೋಟಿಕರ್ ನಮ್ಮ ಪಕ್ಷ ಸೇರ್ಪಡೆ ಆಗಿದ್ದಾರೆ. ಜೊತೆಗೆ ಹಲವು ಕಾರ್ಯಕರ್ತರನ್ನು ಪಕ್ಷಕ್ಕೆ ಕರೆತಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕರಿಂದ ಐದು ಸ್ಥಾನ ಗೆಲ್ಲುವ ಅವಕಾಶ ಇದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು ಜೆಡಿಎಸ್ ಅಪ್ಪ ಮಕ್ಕಳ ಪಕ್ಷವಲ್ಲ, ಇದು ಕಾಂಗ್ರೇಸ್'ಗೆ ಅನ್ವಯವಾಗುತ್ತದೆ. ಜೆಡಿಎಸ್ ಅನ್ನು ಯಾರೂ ಮುಗಿಸಲು ಸಾಧ್ಯವಿಲ್ಲ. ನಾವು ನಮ್ಮ ಸ್ವಂತ ಬಲದಿಂದ ಸರ್ಕಾರ ರಚಿಸುತ್ತೇವೆ ಎಂದು ಆತ್ಮವಿಶ್ವಾಸದಿಂದ ನುಡಿದರು. ನಮ್ಮ ಪಕ್ಷ ಸತ್ತೇ ಹೋಯಿತು ಎಂದು ಕೊಂಡಿದ್ದ ಸಿದ್ದರಾಮಯ್ಯ ನವರಿಗೆ ಈ ಪಕ್ಷ ಏನು ಅಂತಾ ನಿಧಾನವಾಗಿ ತಿಳಿಯುತ್ತದೆ ಎಂದು ತಿಳಿಸಿದ ಹೆಚ್ಡಿಡಿ, ಸಿದ್ದರಾಮಯ್ಯ ಕಾಂಗ್ರೆಸ್'ಗೆ ಅನಿವಾರ್ಯವಾಗಿದ್ದರು, ಆದರೆ ನಮಗೇನಲ್ಲ ಎಂದು ಅಣಕ ಮಾಡಿದ್ದಾರೆ.
ಹಿಂದುತ್ವದ ಬಗ್ಗೆ ದೇವೇಗೌಡರ ಹೇಳಿಕೆ...
ನಾವು ದೇವರನ್ನೂ ನಂಬುತ್ತೇವೆ ಜನತೆಯ ಆಶೀರ್ವಾದ ಹಾಗೂ ಸ್ವಯಂ ಶಕ್ತಿಯಿಂದ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿರುವ ದೇವೇಗೌಡರು ಹಿಂದುತ್ವದ ಬಗ್ಗೆಯೂ ಮಾತನಾಡಿದ್ದಾರೆ... "ಹಿಂದುತ್ವದ ಫಿಲಾಸಫಿಯೇ ಸಹನೆ, ನೀವು ಇನ್ನೊಂದು ಧರ್ಮವನ್ನು ಸಹಿಸದೇ ಇದ್ದರೆ ನಿಮ್ಮದೆಂತ ಹಿಂದುತ್ವ. ಶೃಂಗೇರಿ ಗುರುಗಳು ಆಚರಿಸುತ್ತಾರಲ್ಲ ಅದು ನಿಜವಾದ ಹಿಂದುತ್ವ" ಎಂದು ತಿಳಿಸಿದ್ದಾರೆ.