ನರೇಂದ್ರ ಮೋದಿಗೆ ಸಿದ್ದರಾಮಯ್ಯ ಅಭಿನಂದನೆ! ಬಳಿಕ ಹೇಳಿದ್ದೇನು?
ನಮ್ಮ ಪಕ್ಷದ ಸೋಲು ಅನಿರೀಕ್ಷಿತವಾಗಿದ್ದರೂ ಜನಾಭಿಪ್ರಾಯಕ್ಕೆ ತಲೆ ಬಾಗಿ ವಿನಯಪೂರ್ವಕವಾಗಿ ಸ್ವೀಕರಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಲೋಕಸಭೆ ಚುನಾವಣೆ 2019ರ ಮತಎಣಿಕೆ ಬಹುತೇಕ ಪೂರ್ಣಗೊಂಡಿದ್ದು, ಭಾರತಿಯ ಜನತಾ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಏತನ್ಮಧ್ಯೆ, ಕಾಂಗ್ರೆಸ್ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಹೀನಾಯ ಸೋಲು ಅನುಭವಿಸಿದೆ. ಈ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಈ ಚುನಾವಣೆಯಲ್ಲಿ ಬಹುಮತ ಗಳಿಸಿರುವ ಬಿಜೆಪಿ ಮತ್ತು ಅದರ ನೇತೃತ್ವ ವಹಿಸಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಮುಂದಿನ ಐದು ವರ್ಷ ಜನ ಮೆಚ್ಚುವಂತಹ, ಇಡೀ ದೇಶವನ್ನು ಕುವೆಂಪು ಅವರು ಹೇಳಿರುವಂತೆ 'ಸರ್ವಜನಾಂಗದ ಶಾಂತಿಯ ತೋಟ'ವನ್ನಾಗಿ ಮಾಡುವ ರೀತಿಯಲ್ಲಿ ಆಡಳಿತ ನೀಡಲಿ ಎಂದು ಹಾರೈಸುತ್ತೇನೆ" ಎಂದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ"ರಾಜ್ಯದಿಂದ ಆಯ್ಕೆಯಾದ ಎಲ್ಲ ಸಂಸದರೂ ಚುನಾವಣೆ ಮುಗಿದ ಮೇಲೆ ಪಕ್ಷಾತೀತವಾಗಿ ನಮ್ಮ ರಾಜ್ಯದ ಪ್ರತಿನಿಧಿಗಳಾಗಿರುತ್ತಾರೆ, ಅವರೆಲ್ಲರಿಗೂ ಅಭಿನಂದನೆಗಳು. ಲೋಕಸಭೆಯಲ್ಲಿ ರಾಜ್ಯದ ದನಿ ಕೇಳಿಸುವಂತೆ ಮತ್ತು ಹಿತರಕ್ಷಿಸುವಂತೆ ಅವರೆಲ್ಲರೂ ಕೆಲಸ ಮಾಡಲಿ ಎಂದು ಹಾರೈಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆಯೂ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಸೋಲು-ಗೆಲುವುಗಳು ರಾಜಕೀಯ ಜೀವನದ ಅವಿಭಾಜ್ಯ ಅಂಗ. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ನಮ್ಮ ಪಕ್ಷದ ಸೋಲು ಅನಿರೀಕ್ಷಿತವಾಗಿದ್ದರೂ ಜನಾಭಿಪ್ರಾಯಕ್ಕೆ ತಲೆ ಬಾಗಿ ವಿನಯಪೂರ್ವಕವಾಗಿ ಸ್ವೀಕರಿಸಿದ್ದೇವೆ. ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿದ ಮತದಾರ ಬಂಧುಗಳಿಗೆ ಅಭಿನಂದನೆಗಳು" ಎಂದಿದ್ದಾರೆ.