ಬಿಜೆಪಿಯವರು ಏಟು ತಿಂದವರಿಗೂ, ಸತ್ತವರಿಗೂ ಪಕ್ಷದ ಸದಸ್ಯತ್ವ ನೀಡುತ್ತಿದ್ದಾರೆಯೇ?- ಸಿದ್ದರಾಮಯ್ಯ
ಬೆಂಗಳೂರು: ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕ್ರಿಯಾಶೀಲವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮೊನಚು ಟ್ವೀಟ್ ಗಳಿಂದಲೇ ಪ್ರತಿಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡುತ್ತಿದ್ದಾರೆ. ಆ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ.
ಮೊಹಮ್ಮದ್ ಹ್ಯಾರಿಸ್ ನಲಪಾಡ್ ಹಲ್ಲೆಯಿಂದ ತೀವ್ರಗಾಯಗೊಂಡಿರುವ ವಿದ್ವತ್ ವಿಚಾರವಾಗಿ ಪ್ರತಿಕ್ರಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಅವನು ತಮ್ಮ ಪಕ್ಷದ ಕಾರ್ಯಕರ್ತ ಎಂದು ಹೇಳಿದ್ದಾರೆ. ಇದಕ್ಕೆ ತಕ್ಷಣ ಟ್ವೀಟ್ ಮೂಲಕ ಪ್ರತ್ಯುತ್ತರ ಕೊಟ್ಟಿರುವ ಸಿದ್ದರಾಮಯ್ಯನವರು "ರಾಜ್ಯದಲ್ಲಿ ಸತ್ತವರು, ಏಟು ತಿಂದವರೆಲ್ಲರೂ ತಮ್ಮ ಕಾರ್ಯಕರ್ತರೆಂದು ಹೇಳಿಕೊಳ್ಳುತ್ತಿರುವ ಬಿಜೆಪಿ, ಜೀವಂತರಾಗಿರುವವರಿಗೆ ಮಾತ್ರವಲ್ಲ, ಸತ್ತವರಿಗೂ ಪಕ್ಷ ಸದಸ್ಯತ್ವ ನೀಡುತ್ತಿದ್ದಾರೆಯೇ?' ಎಂದು ಬಿಜೆಪಿಯ ಆರೋಪಕ್ಕೆ ಟ್ವೀಟಿನ ಟಾಂಗ್ ನೀಡಿದ್ದಾರೆ.
ಇನ್ನು ಮುಂದುವರೆದು ರಾಜ್ಯದಲ್ಲಿ ಗೂಂಡಾ ಸರ್ಕಾರವಿದೆ ಎನ್ನುವ ಅಮಿತ್ ಶಾ ರವರ ಆರೋಪಕ್ಕೆ ಉತ್ತರ ನೀಡುತ್ತಾ "ರಾಜ್ಯದಲ್ಲಿ ಗೂಂಡಾ ಸರ್ಕಾರ ಎಂದು ಆರೋಪಿಸುತ್ತಿರುವವರು ಯಾರು? ಜೈಲು ಸೇರಿದ, ಗಡಿಪಾರಾದ ಗುಜರಾತ್ ನ ಮಾಜಿ ಗೃಹ ಸಚಿವರು." ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯನವರು ಎದಿರೇಟು ನೀಡಿದ್ದಾರೆ.