ಬೆಂಗಳೂರು: SIT ಸಿದ್ದರಾಮಯ್ಯ ಇನ್ವೆಸ್ಟಿಗೇಶನ್ ಟೀಮ್ ಹಾಗೂ ಶಿವಕುಮಾರ್ ಇನ್ವೆಸ್ಟಿಗೇಶನ್ ಟೀಮ್ ಆಗಿ ಕೆಲಸ ಮಾಡುತ್ತಿದೆ. ಅವರಿಬ್ಬರೂ ಹಾಗೂ ಪ್ರಭಾವಿ ಸಚಿವರ ಒತ್ತಡಕ್ಕೆ SIT ಸಿಲುಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.


COMMERCIAL BREAK
SCROLL TO CONTINUE READING

ಪೆನ್ ಡ್ರೈವ್ ಹಾಗೂ ಮಹಿಳೆಯರ ವಿಡಿಯೋ ಬಹಿರಂಗ ಮಾಡಿದ ಎರಡೂ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು. ತಪ್ಪಿದರೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು. ಮಹಿಳೆಯರ ವಿಡಿಯೋಗಳನ್ನು ಪೆನ್ ಡ್ರೈವ್ ಗಳಿಗೆ ತುಂಬಿ ಹಾದಿಬೀದಿಯಲ್ಲಿ ಸುರಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕ್ರಮ ಜರುಗಿಸಬೇಕು ಹಾಗೂ ವಿಡಿಯೋ ಲೀಕ್ ಪ್ರಕರಣದಲ್ಲಿ ನೇರವಾಗಿ ಶಾಮೀಲಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡಬೇಕು ಎಂದರು.


ಇದನ್ನೂ ಓದಿ: ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಪತ್ನಿ-ಮಗ ಯಾರು ಗೊತ್ತಾ? ದೇಶದ ಪ್ರಖ್ಯಾತ ಕ್ರೀಡಾ ಸಂಸ್ಥೆಯ ಸ್ಥಾಪಕಿ ಈಕೆ, ಮಗನೂ ಕ್ರಿಕೆಟಿಗನೇ!


ಎರಡೂ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ಮಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಜಾತ್ಯತೀತ ಜನತಾದಳ ಪಕ್ಷವು ರಾಜ್ಯಪಾಲರಿಗೆ ದೂರು ನೀಡಲಿದೆ ಎಂದರು.


ಬೆಂಗಳೂರಿನಲ್ಲಿ ಮಂಗಳವಾರ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಈ ಎಲ್ಲಾ ವಿಷಯಗಳನ್ನು ತಿಳಿಸಿದರಲ್ಲದೆ, ಸಿಬಿಐ ತನಿಖೆ, ಸಂಪುಟದಿಂದ ಡಿಕೆಶಿ ವಜಾ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.


ರಾಜ್ಯದಲ್ಲಿ ನಡೆದ ಈ ಘಟನೆ ಅತ್ಯಂತ ಕೆಟ್ಟದ್ದು. ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯಲು ಇನ್ನೆರಡು ದಿನ ಇರುವಾಗಲೇ ಪೆನ್ ಡ್ರೈವ್ ಹಂಚಿಕೆ ಮಾಡಿದ್ದಾರೆ. ಪೋಲಿಸರನ್ನು ರಕ್ಷಣೆಗೆ ಇಟ್ಟುಕೊಂಡು ಮಾಡಿದ್ದಾರೆ. ರಾಜ್ಯದ ಎಲ್ಲ ಕಡೆ ಹಂಚಿದ್ದಾರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಹಂಚಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಆರೋಪ ಮಾಡಿದರು.


ವಿಡಿಯೋ ಬಿಟ್ಟವರು ಎಲ್ಲಿ?


ಹಾಸನದ ಜೆಡಿಎಸ್‌ ಅಭ್ಯರ್ಥಿಯ ಎಲೆಕ್ಷನ್ ಏಜೆಂಟ್ ಆಗಿರುವ ಪೂರ್ಣಚಂದ್ರ ಅವರು ಏಪ್ರಿಲ್ 22ನೇ ತಾರೀಕಿನಂದೇ ಹಾಸನದ ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿಗೆ ಈ ಬಗ್ಗೆ ದೂರು ಕೊಟ್ಟಿದ್ದಾರೆ. ಏಪ್ರಿಲ್ 21ರ ರಾತ್ರಿ ಹಾಸನ ಸಂಸದರ ಅಶ್ಲೀಲ ವಿಡಿಯೋ ನೋಡಲು ಈ ವಾಟ್ಸಾಪ್ ಫಾಲೋ ಮಾಡಿ, ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ಪೋಸ್ಟ್ ಹಾಕಿರುವ ವ್ಯಕ್ತಿಯ ಬಗ್ಗೆ ದೂರು ನೀಡಿದ್ದಾರೆ. ಆದರೆ, ದೂರು ತೆಗೆದುಕೊಂಡ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಏನೂ ಮಾಡಲಿಲ್ಲ. ವಿಡಿಯೋ ಕದ್ದು ಬೇರೊಬ್ಬರಿಗೆ ಕಳಿಸಿದ ಕಾರು ಚಾಲಕ ಕಾರ್ತಿಕ್ ಹಾಗೂ ವಿಡಿಯೋ ಕ್ಷಣಗಣನೆ ಪೋಸ್ಟ್ ಹಾಕಿ ಪೆನ್ ಡ್ರೈವ್ ಹಂಚಿಕೆ ಮಾಡಿರುವ ಸಚಿವರೊಬ್ಬರ ಆಪ್ತ ನವೀನ್ ಗೌಡ ಎಂಬುವರ ವಿರುದ್ಧ FIR ದಾಖಲಾಗಿದೆ. ಇದುವರೆಗೂ ಅವರಿವರನ್ನು ಯಾಕೆ ಬಂಧಿಸಿಲ್ಲ ಹಾಗೂ ಆ ಪ್ರಕರಣಗಳನ್ನು ಎಸ್ ಐಟಿಗೆ ಯಾಕೆ ವರ್ಗಾವಣೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು.


ಈ ಪ್ರಕರಣದಲ್ಲಿ ಭಾಗಿಯಾದವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಆದರೆ, ಆ ವಿಡಿಯೋಗಲ್ಲಿರುವ ಮಹಿಳೆಯರನ್ನು ಬೀದಿಗೆ ತಂಡ ನೀಚರಿಗೆ ಶಿಕ್ಷೆ ಆಗಬೇಕು. ಅಶ್ಲೀಲ ವಿಡಿಯೋಗಳನ್ನು ಪೋಸ್ಟ್  ಮಾಡಿದ ನವೀನ್ ಗೌಡನಿಗೆ ಏನು ಶಿಕ್ಷೆಯಾಗಿದೆ. ಯಾರು ಇವನನ್ನು ರಕ್ಷಣೆ ಮಾಡುತ್ತಿದ್ದಾರೆ? ಪೂರ್ಣಚಂದ್ರ ಅವರು ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ನವೀನ್ ಗೌಡ ಸೇರಿ ನಾಲ್ವರ ಮೇಲೆ ದೂರು ನೀಡಿದ್ದಾರೆ. ಇಲ್ಲಿಯವರೆಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಿಎಂ ಯಾವ ಧೈರ್ಯದಿಂದ ನಾನು ಸೋಲುತ್ತೇನೆ ಎಂದರು?


ಈ ಚುನಾವಣೆ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೂರು ಬಾರಿ ಹೇಳಿದ್ದಾರೆ. ಈ ಬಾರಿ ಕುಮಾರಸ್ವಾಮಿ  ಸೇರಿದಂಥೆ ಜೆಡಿಎಸ್ ಪಕ್ಷದ ನಾಲ್ಕೂ ಅಭ್ಯರ್ಥಿಗಳು ಸೋಲುತ್ತಾರೆ ಎಂದು. ಕುಮಾರಸ್ವಾಮಿ ಸೋಲಿನ ಭಯದಿಂದ ಮಂಡ್ಯಕ್ಕೆ ಬಂದಿದ್ದಾರೆ ಎಂದು ಯಾವ ಧೈರ್ಯದಿಂದ ಹೇಳಿದ್ದಾರೆ? ಈ ಪೆನ್ ಡ್ರೈವ್ ಧೈರ್ಯದಿಂದ ಅವರು ಹೀಗೆ ಹೇಳಿದ್ದರು. ಈ ಪೆನ್ ಡ್ರೈವ್ ಹಿಂದೆ ಯಾರೆಲ್ಲ ಇದ್ದಾರೆ, ಅದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ಅದುವರೆಗೂ ಇದನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದರು.


ಹಾಸನ ಜಿಲ್ಲೆಯ ಡಿಸಿ, ಎಸ್ಪಿ ಅವರಿಗೆ ಪೂರ್ಣಚಂದ್ರ ತೇಜಸ್ವಿ ನೀಡಿದ ದೂರಿಗೆ ಪ್ರತಿಯಾಗಿ ಅವರು ಹಿಂಬರಹ ನೀಡಿದ್ದಾರೆ. ಅಂದ ಮೇಲೆ ಈ ವಿಷಯ ಸರ್ಕಾರದ ಗಮನಕ್ಕೆ ಹೊಯ್ತು ಎಂದು ಅರ್ಥ ಅಲ್ಲವೇ? ಅಲ್ಲಿನ ಸೆನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಯಿತು. ಹಾಸನ ನಗರದಾದ್ಯಂತ ಸುಮಾರು 25 ಸಾವಿರ ಪೆನ್ ಡ್ರೈವ್ ಹಂಚಿದ್ದಾರೆ ಎಂದು ಮಾಧ್ಯಮಗಳಲ್ಲಿ  ವರದಿಯಾಗಿದೆ. ದೂರು ದಾಖಲಿಸಿದ ಬಳಿಕವೂ ಯಾವುದೇ ಕ್ರಮ ಕೈಗೊಂಡಿಲ್ಲ. ಯಾರಾದರೊಬ್ಬರು ಯಾರ ವಿರುದ್ಧವಾದರೂ ಒಂದು ಅವಹೇಳನಕಾರಿ ಪೋಸ್ಟ್ ಹಾಕಿದರೆ ಪೊಲೀಸರು ತಕ್ಷಣ ಹುಡುಕಿಕೊಂಡು ಅವನ ಮನೆ ಬಾಗಿಲಿಗೆ ಹೋಗುತ್ತಾರೆ. ಆದರೆ, ಈ ಪ್ರಕರಣದಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ ಎಂದು ಕಿಡಿಕಿಡಿಯಾದರು.


ಮೊದಲು ಹೊಳೆನರಸೀಪುರದಲ್ಲಿ ಒಂದು ಕೇಸ್ ದಾಖಲು ಮಾಡಿದ್ದರು. ನಂತರ ಗನ್ ಪಾಯಿಂಟ್’ನಲ್ಲಿ ಅತ್ಯಾಚಾರ ಎಸಗಿದರು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಒಬ್ಬರಿಂದ ದೂರು ಕೊಡಿಸಿದ್ದಾರೆ. ಆದರೆ, ಗನ್ ಪಾಯಿಂಟ್ ನಲ್ಲಿ ಅತ್ಯಾಚಾರಕ್ಕೆ ಒಳಗಾದ ಆ ಮಹಿಳೆ ಆ ಘಟನೆ ನಡೆದ ಮರುದಿನವೇ ಆರೋಪಿತ ವ್ಯಕ್ತಿಯ ಜತೆಯೇ ವೇದಿಕೆ ಹಂಚಿಕೊಂಡು ಅವರ ಪಕ್ಕದಲ್ಲಿಯೇ ಅಸೀನರಾಗಿದ್ದಾರೆ. ಮೊದಲ ಪೆನ್ ಡ್ರೈವ್ ನಲ್ಲಿದ್ದ ಮಹಿಳೆ ಏಪ್ರಿಲ್ 22ರಂದು ಚುನಾವಣೆಯ ಪ್ರಚಾರದಲ್ಲಿ ಪ್ರಜ್ವಲ್ ಜತೆ ಇದ್ದಾರೆ. ಅದೇ ಏಪ್ರಿಲ್ 28ರಂದು ಆ ಮಹಿಳೆಯಿಂದ ದೂರು ಕೊಡಿಸಿದ್ದಾರೆ. ಈ ಮಾಹಿತಿಗಳೆಲ್ಲ ಸೋರಿಕೆ ಮಾಡಿದವರು ಯಾರು? ಇಂಥ ಅಧಿಕಾರಿಗಳಿಂದ ಸರಿಯಾದ ತನಿಖೆ ಆಗುತ್ತದೆಯೇ? ಎಂದು ಅವರು ಪ್ರಶ್ನಿಸಿದರು.


ಎಷ್ಟು ಸೂಕ್ಷ್ಮ ಪ್ರಕರಣದ ತನಿಖೆಯ ಮಾಹಿತಿಯನ್ನು ಯಾರು ಹೊರಗೆ ಬಿಟ್ಟರು? ಯಾರೋ ಅತ್ಯಂತ ವ್ಯವಸ್ಥಿತವಾಗಿ,  ಉದ್ದೇಶಪೂರ್ವಕವಾಗಿಯೇ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಸ್ಪಷ್ಟ ಆದೇಶವೇ ಇದೆ, ತನಿಖೆಯ ಮಾಹಿತಿ ಹೊರಗೆ ಬರಬಾರದು ಎಂದು. ಆದರೆ, ನ್ಯಾಯಾಲಯದ ಆದೇಶ ಇಲ್ಲಿ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸಿದರು.


ಈ ಸಮಯದವರೆಗೂ ರೇವಣ್ಣ ವಿರುದ್ಧ ಯಾರು ದೂರು ನೀಡಿಲ್ಲ. ಕಿಡ್ನಾಪ್ ಪ್ರಕರಣ ಹಾಕಿದ್ದಾರೆ. ಆ ಹೆಣ್ಣುಮಗಳನ್ನು ಯಾರು ಕಂಡು ಹಿಡಿದರು? ಯಾರು ಆ ಹೆಣ್ಣುಮಗಳನ್ನ ಕರೆದುಕೊಂಡು ಬಂದರು? 24 ಗಂಟೆಗಳ ಕಾಲ ನಿಮ್ಮ ಕಚೇರಿಯಲ್ಲಿ ಕೂರಿಸಿಕೊಂಡಿರಿ. ಇಲ್ಲಿಯವರೆಗೂ ಆ ಹೆಣ್ಣು ಮಗಳನ್ನು ನ್ಯಾಯಮೂರ್ತಿಗಳ ಮುಂದೆ ಯಾಕೆ ಕರೆದುಕೊಂಡು ಹೋಗಿಲ್ಲ? ರೇವಣ್ಣ ಸಹಕಾರ ಕೊಡುತ್ತಿಲ್ಲ ಎಂದು ಮಾಹಿತಿ ನೀಡುತ್ತಾರೆ. ರೇವಣ್ಣ ಇವರಿಗೆ ಬೇಕಾದ ಹಾಗೆ ಹೇಳಿಕೆ ಬರೆದುಕೊಡಲು ಆಗುತ್ತಾ? ಅದಕ್ಕೆ ಹೇಳಿದ್ದು ಇದು ಶಿವಕುಮಾರ್ ಟೀಮ್ ತನಿಖೆ ಎಂದು ಕಿಡಿಕಾರಿದರು.


ಪೆನ್ ಡ್ರೈವ್ ಸೂತ್ರಧಾರಿ ಕಾರ್ತಿಕ್ ಎಲ್ಲಿದ್ದಾನೆ?


ಪೆನ್ ಡ್ರೈವ್ ಸೂತ್ರಧಾರಿ ಕಾರ್ತಿಕ್ ಎಲ್ಲಿದ್ದಾನೆ? ಎಂದು ಇಲ್ಲಿಯವರೆಗೂ ಪತ್ತೆ ಹಚ್ಚಲು ಸಾಧ್ಯ ಆಗಿಲ್ಲ. ಅವನು ಎಲ್ಲಿ ಕೂತು ವಿಡಿಯೋ ಮಾಡಿದ? ನಾನು ಕೇವಲ ದೇವರಾಜೇಗೌಡರಿಗೆ ಮಾತ್ರ ಪೆನ್ ಡ್ರೈವ್ ಕೊಟ್ಟೆ ಎಂದು ಹೇಳಿದ್ದ ಅವನು. ಆದರೆ ಇಲ್ಲಿಯವರೆಗೂ ಏಕೆ ಆತನನ್ನು  ಬಂಧಿಸಿಲ್ಲ? ನವೀನ್ ಗೌಡ ಎಲ್ಲಿದ್ದಾನೆ? ಆತನನ್ನು ಬಂಧಿಸಲು ಯಾಕಾಗಿಲ್ಲ? ಎಂದು ಆಕ್ರೋಶ ಹೊರಹಾಕಿದರು.


ಆಡಿಯೋ ಕ್ಲಿಪ್ ಕೇಳಿಸಿದ ಹೆಚ್ಡಿಕೆ:


ಹಾಸನದಲ್ಲಿ ಪೆನ್ ಡ್ರೈವ್ ಹಂಚಿಕೆ ಮಾಡಿರುವ ಸಚಿವರೊಬ್ಬರ ಶಿಷ್ಯನ ನವೀನ್ ಗೌಡನ ಫೋಟೋಗಳನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರದರ್ಶಿಸಿದ ಕುಮಾರಸ್ವಾಮಿ, ನವೀನ್ ಗೌಡ ತನ್ನ ಗೆಳೆಯನ ಜತೆ ಪೆನ್ ಡ್ರೈವ್ ಹಂಚಿಕೆ ಕುರಿತು ಮಾತನಾಡಿರುವ ಆಡಿಯೋ ಕ್ಲಿಪ್ ಅನ್ನು ಕೇಳಿಸಿದರು.


ಅಲ್ಲದೆ, ಸಚಿವರೊಬ್ಬರು ಹಾಗೂ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಜತೆ ನವೀನ್ ಗೌಡ ಇರುವ ಪೋಟೊಗಳನ್ನು ಮಾಧ್ಯಮಗಳಿಗೆ ತೋರಿಸಿದರಲ್ಲದೆ, "ಏನೋ ಗುಟ್ಟಾಗಿ ಮಾತನಾಡ್ತಿದ್ದಾನೆ" ಎಂದರು.


ಪೆನ್ ಡ್ರೈವ್ ಕುಟುಂಬ ಎಂದು ಸಂಸದ ಸುರೇಶ್ ಹೇಳುತ್ತಾರೆ. ನಿಮ್ಮದು ಏನೇನು ಓಡಾಡ್ತಿದೆ ಎನ್ನೋದು ಗೊತ್ತಿಲ್ಲವೇ ಸುರೇಶು? ಬೇಕಾದಷ್ಟು ಇವೆ, ಇನ್ನೂ ಬೇಕಾದಷ್ಟು ಬರುತ್ತವೆ, ನಿರೀಕ್ಷಿಸಿ ಎಂದು ತಿರುಗೇಟು ಕೊಟ್ಟರು.


ಹೌದು, ಹಾಸನ ಸಭೆಯಲ್ಲಿ ನನ್ನ ಮಗ ಎಂದು ಹೇಳಿದ್ದೆ. ಚುನಾವಣೆ ವೇಳೆ ಹೇಳಿದ್ದೆ. ಆದರೆ ಈ ರೀತಿ ಅಂತ ಗೊತ್ತಿರಲಿಲ್ಲ ನನಗೆ? ಅಲ್ಲಿನ ಕಾರ್ಯಕರ್ತರು, ಪ್ರಜ್ವಲ್ ಹಿರಿಯರಿಗೆ ಗೌರವ ಕೊಡಲ್ಲ, ಅಭ್ಯರ್ಥಿ ಬದಲಾವಣೆ ಮಾಡಿ ಎಂದು ನನ್ನ ಬಳಿ ಹೇಳಿದ್ದರು. ಅದಕ್ಕಾಗಿ ಅಭ್ಯರ್ಥಿ ಬದಲಾವಣೆ ಮಾಡಲು ತೀರ್ಮಾನ ಮಾಡಿದ್ದೆ ಇದು ತಪ್ಪಾ? ಅಶ್ಲೀಲ ವಿಡಿಯೋಗಳ ವಿಷಯ ನನಗೆ ಗೊತ್ತಿರಲಿಲ್ಲ. ಹೌದು, ತಪ್ಪು ತಿದ್ದಿಕೊಳ್ಳಲು ಅವಕಾಶ ಕೊಡಿ ಎಂದು ಕೇಳಿದ್ದೆ. ಅದನ್ನೆ ದೊಡ್ಡದು ಮಾಡಿದರು ಕೆಲವರು. ರಕ್ತ ಸಂಬಂಧ ಇಲ್ಲ ಎಂದು ಹೇಳಿಲ್ಲ, ಆಮೇಲೆ ನಾವು ಬೇರೆ ಇದ್ದೇವೆ ಎಂದಷ್ಟೇ ಹೇಳಿದ್ದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.


ಸಂತ್ರಸ್ತೆಯರು ಸಿಗುತ್ತಿಲ್ಲವಂತೆ!!


ಈ ತನಿಖೆಯಲ್ಲಿ ಎಸ್ ಐಟಿಯವರಿಗೆ ದೂರು ನೀಡಲು ಸಂತ್ರಸ್ತೆಯರು ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಸರಿಯಾಗಿ ಹುಡುಕಿದರೆ ಯಾರು ಯಾರಿಗೆ ಎಷ್ಟೆಷ್ಟು ದುಡ್ಡು ಕೊಟ್ಟು ದೂರು ಕೊಡಿಸಿದ್ದಾರೆ ಎಂದು ಹೊರಗೆ ಬರಲಿದೆ ಎಂದು ಹೇಳಿದರು.


ಪ್ರಜ್ವಲ್ ರೇವಣ್ಣ, ರೇವಣ್ಣ ಅವರಿಗೆ ಬ್ಲೂ ಕಾರ್ನರ್, ರೆಡ್ ಕಾರ್ನರ್ ನೋಟಿಸ್ ಗಳನ್ನು ಕೊಡಿ, ಸಂತೋಷ. ಆದರೆ, ಡಾ.ಜಿ ಪರಮೇಶ್ವರ್ ಅವರೇ. ನೀವು ಗೃಹ ಸಚಿವರಿದ್ದೀರಿ. ಆ 5 ಜನ ಹೆಣ್ಣುಮಕ್ಕಳ ಮಾನ ತೆಗೆದ್ರಲ್ಲ, ಇಡೀ ರಾಜ್ಯದಲ್ಲಿ ಪೆನ್ ಡ್ರೈವ್ ಬಿಟ್ರಲ್ಲ. ಇವರ ಮೇಲೆ ಯಾವ ಲುಕ್ ಔಟ್ ನೋಟಿಸ್ ಕೊಟ್ರಿ? ಅವರನ್ನು ಟಚ್ ಮಾಡಿಲ್ಲ. ನಮ್ಮನ್ನು ಹೆದರಿಸುತ್ತೀರಾ? ನಾವು ಹೆದರಿ ಹೋಗೋದಿಲ್ಲ. ಇಲ್ಲೆ ಇರುತ್ತೇವೆ ಎಂದು ಸವಾಲೆಸೆದರು,


ಟೀಕೆ ಮಾಡೋರಿಗೆ ತಿರುಗೇಟು


ಇದು ಕುಟುಂಬದ ಜಗಳ ಎಂದು ಕೆಲವರು ಹೇಳಿದ್ದಾರೆ. ಸಚಿವ ಕೃಷ್ಣ ಭೈರೇಗೌಡ ಇದು ವಿಶ್ವದಲ್ಲಿಯೇ ದೊಡ್ಡ ಪ್ರಕರಣ ಎಂದಿದ್ದಾರೆ. ಅವರಿಗೆಲ್ಲ ಬಡವರ ಬಗ್ಗೆ ಎಷ್ಟು ಕಾಳಜಿ ಇದೆ ಎನ್ನುವುದು ಗೊತ್ತಿದೆ. ಕಾರು ಚಾಲಕ ಕಾರ್ತಿಕ್ ಹಾಸನದಲ್ಲಿ ಜಾಮೀನು ಅರ್ಜಿ ಹಾಕಿದ್ದಾನೆ. ಅಲ್ಲಿ ಹಾಕಲು ಬರುವುದಿಲ್ಲ, ಎಸ್ ಐಟಿಯವರು ಏನು ಮಾಡ್ತಿದ್ದಾರೆ? ನಿನ್ನೆಯ ದಿನ ಆ ಡಿಸಿಎಂ ಮುಖ ನೋಡಿದರೆ ಗೊತ್ತಾಗುತ್ತದೆ. ಅವರ ಪರಿಸ್ಥಿತಿ ಬಾಲ ಸುಟ್ಟ ಬೆಕ್ಕಿನಂತೆ ಆಗಿದೆ ಎಂದು ಕುಮಾರಸ್ವಾಮಿ ಕುಟುಕಿದರು.


ದೇವೆಗೌಡರ ಕುಟುಂಬ ನಾಶ ಮಾಡಲು ಎಲ್ಲ ಪ್ಲಾನ್ ಆಗಿದೆ ಎಂದು ಒಬ್ಬ ಮಧ್ಯವರ್ತಿ ಹೇಳಿದ್ದಾನೆ. ಅದು ಆತನ ಜನ್ಮದಲ್ಲಿ ಬರೆದಿಲ್ಲ. ವಕೀಲ ದೇವರಾಜ್ ಗೌಡರು ಸತ್ಯ ಹೇಳಿದ ಮೇಲೆ ಇವರ ಮುಖ ಚಹರೆ ಬದಲಾಗಿದೆ. ಹಿಂದೆ ಇದೇ ಗ್ಯಾಂಗ್ ಬೆಳಗಾವಿ ಶಾಸಕರೊಬ್ಬರ ಸಿಡಿ ಮಾಡಿ ಲೀಕ್ ಮಾಡಿತ್ತು. ₹30ರಿಂದ 40 ಕೋಟಿ ಖರ್ಚು ಮಾಡಿ ಈ ಮಹಾನಾಯಕನೇ ಅದನ್ನೆಲ್ಲಾ ಮಾಡಿದ್ದು. ಅಷ್ಟು ಕೋಟಿ ಖರ್ಚಾಯ್ತು ಅಂತ ಈ ಮಹಾ ನಾಯಕನೇ ಹೇಳಿರುವ ಆಡಿಯೋ ಇದೆ ಎಂದು ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.


ನಮ್ಮ ತಂದೆ ತಾಯಿ ನೋವಿನಲ್ಲಿದ್ದಾರೆ. ಅವರನ್ನು ನೋಡಲು ಹೋದರೆ ಸಿಎಂ ಆದವರು, ಪ್ರಜ್ವಲ್ ಮತ್ತು ರೇವಣ್ಣ ಅವರನ್ನು ರಕ್ಷಣೆ ಮಾಡಲು ಕುಮಾರಸ್ವಾಮಿ, ದೇವೇಗೌಡರು ವಕೀಲರ ಜತೆ ಸಮಾಲೋಚನೆ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಾರೆ. ಮನುಷ್ಯರೇನ್ರಿ ನೀವು?  ಕುಮಾರಸ್ವಾಮಿ -ರೇವಣ್ಣ ಕುಟುಂಬದ ಸಂಘಟಿತ ಪಾಪ ಎಂದು ಹೇಳಿದ್ದೀರಿ. ನಮ್ಮ ಮನೆಗಳ ಮುಂದೆ ಇದ್ದ ಕ್ಯಾಮೆರಾಗಳ ವಿಡಿಯೋಗಳನ್ನು ತರಿಸಿ ನೋಡಿ. ಯಾವ ವಕೀಲರು ಬಂದಿದ್ದರು ಎನ್ನುವುದು ಗೊತ್ತಾಗುತ್ತದೆ ಎಂದು ಕಿಡಿ ಕಾರಿದರು.


ತಂದೆ ತಾಯಿ ಬಾಂಧವ್ಯ ನಿಮಗೆ ಗೊತ್ತಿಲ್ಲದೇ ಇರಬಹುದು. ಆದರೆ ನಮಗೆ ಆ ಬಾಂಧವ್ಯ ಇದೆ. ಮಾತೇತ್ತಿದರೆ ದೇವೆಗೌಡರ ನಿವಾಸ ಅಂತಿರಾ? ಅದು ದೇವೆಗೌಡರ ನಿವಾಸ ಅಲ್ಲ, ಅದು ಅವರ ಮಗಳ ಮನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ:  ಆ ವ್ಯಕ್ತಿಯ ಬಟ್ಟೆಗಳನ್ನು ಕಳ್ಳತನ ಮಾಡ್ತಾರಂತೆ ಅನುಷ್ಕಾ! ಸಾವಿರ ಕೋಟಿ ಒಡೆಯರಾದ್ರೂ ವಿರಾಟ್ ಪತ್ನಿಗಿದೆ ಅದೊಂದು ಚಟ


ಕಾಂಗ್ರೆಸ್ ಕನಸು ಈಡೇರಲ್ಲ


ದೆಹಲಿಯಲ್ಲಿ ನರೇಂದ್ರ ಮೋದಿ ಅವರನ್ನು ತೆಗೆದು ಗದ್ದುಗೆ ಹಿಡಿಯಲು ಈ ಪ್ರಕರಣ ಬಳಸುತ್ತಿದ್ದಾರೆ ಕಾಂಗ್ರೆಸ್ ನಾಯಕರು. ಅದಕ್ಕೆ ನಾನು ಬಿಡಲ್ಲ. ರಾಜಿಗೆ ಒಳಗಾಗಲ್ಲ. ವಕೀಲ ದೇವರಾಜೇಗೌಡರನ್ನ ಏಕೆ ಕರೆಸಿದ್ದೀರಿ? ಅವರನ್ನು ಏಕೆ ಕರೆಸಿದ್ದು? ಈಗ ಅವರನ್ನೇ ಇದರಲ್ಲಿ ಸಿಲುಕಿಸಲು ಸಂಚು ಮಾಡುತ್ತಿದ್ದೀರಿ. ಇಡೀ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಪಾತ್ರದ ದೊಡ್ಡದು. ವಿಡಿಯೋಗಳನ್ನು ಲೀಕ್ ಮಾಡಿದವರು ಅವರೇ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೊ ಅಥವಾ ನ್ಯಾಯಾಂಗ ತನಿಖೆಗೆ ಕೊಡಬೇಕು. ಡಿಕೆ ಶಿವಕುಮಾರ್ ಅವರನ್ನ ಕೂಡಲೇ ಸಂಪುಟದಿಂದ ವಜಾ ಮಾಡಬೇಕು. ಈ ವಿಷಯವನ್ನು ಇಲ್ಲಿಗೆ ಬಿಡಲ್ಲ ಎಂದರು.


 


ನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz


Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್