ಗೌರಿ ಲಂಕೇಶ್ ಹತ್ಯೆ ಪ್ರಕರಣ: 650 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎಸ್ಐಟಿ
ಗೌರಿ ಲಂಕೇಶ್ ಹತ್ಯೆ ನಡೆದ ಎಂಟು ತಿಂಗಳ ಬಳಿಕ ಮೂರನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ವಿಶೇಷ ತನಿಖಾ ದಳ(ಎಸ್ಐಟಿ)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಎಂಟು ತಿಂಗಳ ಬಳಿಕ ವಿಶೇಷ ತನಿಖಾ ದಳ(ಎಸ್ಐಟಿ) ಮೂರನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಬಂಧಿತ ಆರೋಪಿಗಳ ಸಾಕ್ಷ್ಯಗಳನ್ನ ಕಲೆ ಹಾಕಿರುವ ಎಸ್ಐಟಿ ಕೇಸ್ ಬಲಪಡಿಸಲು ಸಂಬಂಧ 131 ಸಾಕ್ಷಿಗಳ ಹೇಳಿಕೆ ದಾಖಲಿಸಿದೆ.
2017ರ ಸೆಪ್ಟೆಂಬರ್ 5ರಂದು ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ಅವರ ಮನೆಯ ಎದುರೇ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಮೊದಲ ಆರೋಪಿಯಾಗಿ ನವೀನ್ ಕುಮಾರ್ ಆಲಿಯಾಸ್ ಹೊಟ್ಟೆ ಮಂಜ, ಎರಡನೇ ಆರೋಪಿಯಾಗಿ ಪ್ರವೀಣ್ ಹೆಸರಲ್ಲಿ ಪ್ರಕರಣ ದಾಖಲಾಗಿದೆ. ಗೌರಿ ಹತ್ಯೆ ಕುರಿತು ಆರೋಪಿ ನವೀನ್ ಆತನ ಸ್ನೇಹಿತರ ಬಳಿ ಮಾಹಿತಿ ಹಂಚಿಕೊಂಡಿದ್ದ. ನವೀನ್ ನಾಪತ್ತೆಯಾಗಿರುವ ಬಗ್ಗೆ ಸ್ನೇಹಿತರು ಪ್ರಶ್ನಿಸಿದಾಗ ಗೌರಿ ಹತ್ಯೆ ಮಾಡಿದ್ದು ನಾವೇ ಎಂದಿದ್ದನಂತೆ. ಅಷ್ಟೇ ಅಲ್ಲದೇ ಪ್ರೊ. ಕೆ.ಎಸ್. ಭಗವಾನ್ ಅವರ ಹತ್ಯೆಗೂ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.