ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ಪ್ರಸ್ತುತ ಇರುವ ದಂಡದ ಮೊತ್ತವನ್ನು ಎರಡು ನೂರು ರೂಪಾಯಿಯಿಂದ ಎರಡು ಸಾವಿರ ರೂ.ಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲಹೆ ನೀಡಿದೆ ಎಂದು ಬೆಂಗಳೂರು ನಗರ ಜಿಲ್ಲಾ ಕ್ಷಯರೋಗ ಮತ್ತು ತಂಬಾಕು ನಿಯಂತ್ರಣಾಧಿಕಾರಿ ಡಾ ಜಿ.ಎ.ಶ್ರೀನಿವಾಸ್ ಮಂಗಳವಾರ ಪ್ರಕಟಿಸಿದರು. 


COMMERCIAL BREAK
SCROLL TO CONTINUE READING

ಬೆಂಗಳೂರು ನಗರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‍ನ ಸಹಯೋಗದೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತ ಒಂದು ದಿನದ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಕೋಟ್ಪಾ ಎಂದೇ ಕರೆಯಲಾಗುವ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಹಾಗೂ ವಾಣಿಜ್ಯ ಮತ್ತು ವ್ಯಾಪಾರ, ಉತ್ಪಾದನೆ, ಪೂರೈಕೆ ಮತ್ತು ವಿತರಣೆ) ನಿಯಂತ್ರಣಾ ಕಾಯದೆ-2003 ಕ್ಕೆ ತಿದ್ದುಪಡಿ ತರಲು ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ಸಂಖ್ಯೆ ಕಡಿವಾಣ ಹಾಕಲು ಪೂರಕ ವಾತಾವರಣ ಸೃಷ್ಠಿಸುವ ಈ ಪ್ರಸ್ತಾವನೆಯು ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಪರಿಶೀಲನಾ ಹಂತದಲ್ಲಿದೆ ಎಂದು ಅವರು ತಿಳಿಸಿದರು. 


ರೋಸ್ ಡೇ !
ವಿಶ್ವ ತಂಬಾಕು ರಹಿತ ದಿನವಾದ ಮೇ 31 ರಂದು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ನಾಲ್ಕೂ ತಾಲ್ಲೂಕು ಆಸ್ಪತ್ರೆಗಳಲ್ಲಿ, ಎಲ್ಲಾ ಎಂಟು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಒಂದು ನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಧೂಮಪಾನ ದುಷ್ಪರಿಣಾಮಗಳ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಅಲ್ಲದೆ, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳು ಜಾಥಾ ನಡೆಸಲಿದ್ದಾರೆ. ಅಂತೆಯೇ, ಧೂಮಪಾನ ಮಾಡುವವರನ್ನು ಕಂಡಾಗ ಗುಲಾಬಿ ಹೂವು ನೀಡಿ ಧೂಮಪಾನದಿಂದ ದೂರವಿರಿ ಎಂಬ ಸಂದೇಶ ಸಾರಲು ಯೋಜಿಸಲಾಗಿದೆ ಎಂದು ಡಾ ಶ್ರೀನಿವಾಸ್ ಅವರು ವಿವರಿಸಿದರು. 


ಸಿಗರೇಟು ಮತ್ತು ಮತ್ತು ಇತರೆ ತಂಬಾಕು ಪದಾರ್ಥಗಳು ಕೇವಲ ಅವುಗಳನ್ನು ಸೇವಿಸುವ ಜನರ ಮೇಲೆ ಮಾತ್ರವಲ್ಲ ಇತರೆ ಜನಸಾಮಾನ್ಯರ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ಒಮ್ಮೆ ಅವಲೋಕಿಸಿದರೆ ಲಾಭಕ್ಕಿಂತಲೂ ನಷ್ಟವೇ ಹೆಚ್ಚು ಎಂಬುದು ಸುಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಆಯುಷ್ಯವನ್ನು ಕಡಿತಗೊಳಿಸುವ ಸಿಗರೇಟು ಮತ್ತು ಇತರೆ ತಂಬಾಕು ಪದಾರ್ಥಗಳ ತಯಾರಿಕಾ ಕಂಪನಿಗಳಿಂದಲೂ ಯಾವುದೇ ಸಾಮುದಾಯಿಕ ಅಭಿವೃದ್ಧಿ ನಿಧಿ ಸ್ವೀಕರಿಸಬಾರದು ಎಂದು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು. 


ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ ನಿಜಾಮುದ್ದೀನ್ ಮದಿನಿ, ಕುಟುಂಬ ಕಲ್ಯಾಣಾಧಿಕಾರಿ ಡಾ ಮಮತಾ, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ ನದೀಮ್ ಅಹಮದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಯ ಉಪ ನಿರ್ದೇಶಕ ಡಿ ಪಿ ಮುರಳೀಧರ್ ಅವರೂ ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.