ಬೆಂಗಳೂರು: ಸಾಮಾಜಿಕ ಭದ್ರತೆ ಮತ್ತು ಗುಣಮಟ್ಟದ ಬದುಕು ದೊರೆತಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ. ಹಾಗಾಗಿ ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿ ನಮ್ಮ ಸರ್ಕಾರದ ಗೆಲುವು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.


COMMERCIAL BREAK
SCROLL TO CONTINUE READING

ಬೆಂಗಳೂರಿನ ಮಾಣಿಕ್​ ಷಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೇರವೇರಿಸಿದ ಸಿಎಂ ಕುಮಾರಸ್ವಾಮಿ ಅವರು, ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದು, ಕೃತಜ್ಞತೆ ಸಲ್ಲಿಸಿದರು.


ಮುಂದುವರೆದು ಮಾತನಾಡಿದ ಅವರು, ಅಖಂಡ ಕರ್ನಾಟಕದ ಅಸ್ಮಿತೆಗೆ ನಮ್ಮ ಸರ್ಕಾರ ಬದ್ಧ. ಬೆಳಗಾವಿಯಲ್ಲಿ ಅಧಿವೇಶನ ಆರಂಭಿಸಿದ ಹೆಮ್ಮೆ ನನಗಿದೆ. ಸಮಸ್ತ ಕನ್ನಡ ನಾಡನ್ನು ಅಭಿವೃದ್ಧಿ ಪಡಿಸುವುದು ನಮ್ಮ ಸರ್ಕಾರದ ಉದ್ದೇಶ. ಹಾಗಾಗಿ ಅಭಿವೃದ್ಧಿ ಎಂದರೆ ಕೇವರ ರಸ್ತೆ, ಮೂಲ ಸೌಕರ್ಯ ಅಲ್ಲ. ಸರ್ವರಿಗೂ ಶಿಕ್ಷಣ, ಸಾಮಾಜಿಕ ನ್ಯಾಯ ಒದಗಿಸುವುದು. ಇದಕ್ಕೆ ಸರಕಾರ ಸದಾ ಬದ್ಧವಾಗಿರಲಿದೆ ಎಂದು ಕುಮಾರಸ್ವಾಮಿ ಹೇಳಿದರು.


ಶಿಕ್ಷಣ ಬದುಕಿಗೆ ದಾರಿದೀಪ, ವಿಜ್ಞಾನ ಆಧಾರಿತ ಜನಪ್ರಿಯ ಶಿಕ್ಷಣ ಸಮಾಜದಲ್ಲಿ ಅಗಾಧ ಪ್ರಭಾವ ಬೀರಬಲ್ಲದು ಎಂಬ ಡಾ.ಎ.ಪಿ.ಜೆ.ಅಬ್ದುಲ್ ಕಲಾಮ್ ಅವರ ಮಾತುಗಳನ್ನು ಪುನರುಚ್ಚರಿಸಿದ ಕುಮಾರಸ್ವಾಮಿ, ಶಿಕ್ಷಣ ಮಾರಾಟದ ವಸ್ತುವಾಗಬಾರದು, ಸರ್ಕಾರಿ ಶಾಲೆಗಳ ಮೂಲಭೂತ ಸೌಲಭ್ಯ ಹೆಚ್ಚಿಸುವ ಕುರಿತು ಸರ್ಕಾರ ಕ್ರಮ ಕೈಗೊಳ್ಳುವುದಲ್ಲದೆ, ಸರ್ಕಾರಿ ಶಾಲೆ ಬಗ್ಗೆ ಪೋಷಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಾಗುವುದು ಎಂದು ಹೇಳಿದರು. 


ಸರ್ವರಿಗೂ ಉತ್ತಮ ಆರೋಗ್ಯ ಸಿಗಬೇಕು ಎಂಬುದು ನಮ್ಮ ಮೈತ್ರಿ ಸರ್ಕಾರದ ಧ್ಯೇಯ. ಹಾಗಾಗಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಆರೋಗ್ಯ ಚಿಕಿತ್ಸೆ ಒದಗಿಸುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ವಿಜ್ಞಾನವನ್ನು ಅಭ್ಯಸಿಸುವ ಹಾಗೂ ಸಂಶೋಧನೆ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು. 


ಇದೇ ಸಂದರ್ಭದಲ್ಲಿ ಕನ್ನಡದ ಆದಿ ಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪು ಅವರನ್ನು ನೆನೆದ ಸಿಎಂ, ಎಲ್ಲಾ ಕವಿಗಳೂ, ಮಹನೀಯರೂ ನಾಡಿಗೆ ಕೊಡುಗೆ ನೀಡಿದ್ದಾರೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಸಾಹಿತ್ಯಕ್ಕೆ ಒಲಿದಿವೆ. ಈ ಮೂಲಕ ಕನ್ನಡದ ಹಿರಿಮೆ ರಾಷ್ಟ್ರವ್ಯಾಪಿ ತಲುಪಿದೆ. ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಕನ್ನಡಕ್ಕೆ ಕನ್ನಡವೇ ಸರಿಸಾಟಿ ಎನ್ನುತ್ತಾ ಕನ್ನಡದ ಮಹತ್ವವನ್ನು ಕುಮಾರಸ್ವಾಮಿ ಸಾರಿದರು.