ಅಪ್ಪನ ಅಸಮಾಧಾನ ತಣಿಸಲು ಮಗಳಿಗೆ ವಕ್ತಾರೆ ಹುದ್ದೆ!
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಇದ್ದಾಗ ರಾಮಲಿಂಗಾರೆಡ್ಡಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಆಗ ಅವರು ಅಸಮಾಧಾನಗೊಂಡು ಬಂಡಾಯ ಸಾರಿದ್ದರು.
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನಗೊಂಡಿರುವ ಮಾಜಿ ಸಚಿವ ಹಾಗೂ ಬೆಂಗಳೂರಿನ ಪ್ರಭಾವಿ ನಾಯಕ ರಾಮಲಿಂಗ ರೆಡ್ಡಿ (Ramlinga Reddy) ಅಸಮಾಧಾನ ತಣಿಸಲು ಅವರ ಪುತ್ರಿ ಹಾಗೂ ಶಾಸಕಿ ಸೌಮ್ಯ ರೆಡ್ಡಿ (Sowmya Reddy) ಅವರಿಗೆ ಕಾಂಗ್ರೆಸ್ ಪಕ್ಷದ ವಕ್ತಾರೆ ಹುದ್ದೆಯನ್ನು ನೀಡಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಇದ್ದಾಗ ರಾಮಲಿಂಗಾರೆಡ್ಡಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಆಗ ಅವರು ಅಸಮಾಧಾನಗೊಂಡು ಬಂಡಾಯ ಸಾರಿದ್ದರು. ಒಂದು ಹಂತದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಪರೇಷನ್ ಕಮಲಕ್ಕೆ ಒಳಗಾಗುತ್ತಾರೆ, ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆಗ ಮಧ್ಯ ಪ್ರವೇಶಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗು ಇನ್ನಿತರರು ರಾಮಲಿಂಗಾರಡ್ಡಿ ಅವರ ಮನವೊಲಿಸಿ ರಾಜೀನಾಮೆ ವಾಪಸ್ ತೆಗೆಸುವುದರಲ್ಲಿ ಯಶಸ್ವಿಯಾಗಿದ್ದರು.
ಹೆಚ್ಚು ಯುವಕರನ್ನು ಪಕ್ಷದ ಸದಸ್ಯರನ್ನಾಗಿ ಮಾಡಲು ಯೂತ್ ಕಾಂಗ್ರೆಸ್ ನಾಯಕರಿಗೆ ಡಿ.ಕೆ. ಶಿವಕುಮಾರ್
ಆದರೆ ರಾಮಲಿಂಗಾರೆಡ್ಡಿ ಅವರ ಅಸಮಾಧಾನ ಕೊನೆಗೊಂಡಿರಲಿಲ್ಲ. ಅದಲ್ಲದೆ ಇತ್ತೀಚೆಗೆ ಎಐಸಿಸಿ ಪುನರ್ರಚನೆ ಮಾಡಲಾಗಿತ್ತು. ಆಗ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ತಮಿಳುನಾಡು, ಪುದುಚೇರಿ ಹಾಗು ಗೋವಾ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರನ್ನು ಮಹಾರಾಷ್ಟ್ರ ರಾಜ್ಯದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಕೃಷ್ಣಭೈರೇಗೌಡ ಅವರನ್ನು ಎಐಸಿಸಿಯ ಕೇಂದ್ರ ಚುನಾವಣಾ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿತ್ತು.
ಈ ಸಂದರ್ಭದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ. ತಮಗೆ ಯಾವುದೇ ಹುದ್ದೆ ನೀಡಿಲ್ಲ ಎಂದು ರಾಮಲಿಂಗಾರೆಡ್ಡಿ ಮತ್ತೆ ಅಸಮಾಧಾನ ಹೊರಹಾಕಿದರು. ಇತ್ತೀಚೆಗೆ ನಡೆದ ಶಾಸಕಾಂಗ ಪಕ್ಷದ ಸಭೆ ಹಾಗೂ ಅಧಿವೇಶನಕ್ಕೂ ಗೈರಾಗಿದ್ದರು. ಹಾಗಾಗಿ ರಾಮಲಿಂಗಾರೆಡ್ಡಿ ಆಕ್ರೋಶವನ್ನು ತಣಿಸಲು ಅವರ ಪುತ್ರಿ, ಶಾಸಕಿ ಸೌಮ್ಯ ರೆಡ್ಡಿ ಅವರನ್ನು ರಾಜ್ಯ ಕಾಂಗ್ರೆಸ್ ವಕ್ತಾರೆಯನ್ನಾಗಿ ನೇಮಕಮಾಡಲಾಗಿದೆ.
ನಿನ್ನೆ ಶಾಸಕಿ ಸೌಮ್ಯ ರೆಡ್ಡಿ ಅವರನ್ನು ರಾಜ್ಯ ಕಾಂಗ್ರೆಸ್ ವಕ್ತಾರೆಯನ್ನಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಆದೇಶ ಹೊರಡಿಸಿದ್ದಾರೆ.