ಶೀಘ್ರ ಸರಕಾರ ರಚನೆಯಾಗದಿದ್ದರೆ, ಸರ್ಕಾರಿ ನೌಕರರಿಗಿಲ್ಲ ಸಂಬಳ: ಸ್ಪೀಕರ್ ರಮೇಶ್ ಕುಮಾರ್
ತಿಂಗಳೊಳಗೆ ನೂತನ ಸರಕಾರ ರಚನೆಯಾಗದೇ ಇದ್ದಲ್ಲಿ, ರಾಷ್ಟ್ರಪತಿ ಆಳ್ವಿಕೆ ಜಾರಿ ಸಂಭವವಿದೆ- ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು: ಜುಲೈ ಅಂತ್ಯದೊಳಗೆ ಸರಕಾರ ರಚನೆಯಾಗದೆ ಇದ್ದರೆ ಹಣಕಾಸು ವಿಧೇಯಕ ಪಾಸಾಗುವುದಿಲ್ಲ. ಒಂದು ವೇಳೆ ಹಾಗೇನಾದರೂ ಆದಲ್ಲಿ ಖಜಾನೆಯಿಂದ ಒಂದು ರೂಪಾಯಿ ಕೂಡ ಡ್ರಾ ಮಾಡಲು ಆಗೋದಿಲ್ಲ. ರಾಜ್ಯದಲ್ಲಿ ಸರ್ಕಾರಿ ಉದ್ಯೋಗಿಗಳು ಸಂಬಳವಿಲ್ಲದೆ ಒದ್ದಾಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ಈ ತಿಂಗಳೊಳಗೆ(ಜು.31) ಸರ್ಕಾರ ರಚನೆಯಾಗಬೇಕು, ಇಲ್ಲವಾದರೆ ಹಣಕಾಸು ವಿಧೇಯಕ ಪಾಸಾಗಲ್ಲ. ಹಣಕಾಸು ವಿಧೇಯಕ ಪಾಸಾಗದಿದ್ದರೆ, ಖಜಾನೆಯಿಂದ ಒಂದು ರೂಪಾಯಿ ಕೂಡ ಡ್ರಾ ಮಾಡಲು ಆಗೋದಿಲ್ಲ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಎದುರಾಗಿದ್ದು, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಂಭವವಿದೆ ಎಂದು ಹೇಳಿದರು.
ಜುಲೈ 31ರೊಳಗೆ ಹೊಸ ಸರಕಾರ ರಚನೆಯಾಗಿ ವಿಧಾನಸಭೆ ಮತ್ತು ವಿಧಾನಪರಿಷತ್ ನಲ್ಲಿ ಬಿಲ್ ಪಾಸಾಗದೆ ಇದ್ದರೆ ಹಣಕಾಸು ವಿಚಾರದಲ್ಲಿ ಸಮಸ್ಯೆ ಎದುರಾಗುವ ಅಪಾಯವಿದೆ. ಸರಕಾರದ ಬೊಕ್ಕಸದಿಂದ ಒಂದು ರೂಪಾಯಿ ಕೂಡಾ ಡ್ರಾ ಮಾಡಲು ಸಾಧ್ಯವಾಗದೇ, ಸರಕಾರಿ ಉದ್ಯೋಗಿಗಳಿಗೆ ಸಂಬಳವಿಲ್ಲದೆ ಒದ್ದಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ರಾಜ್ಯದಲ್ಲಿ ಮೊದಲ ಬಾರಿ ಇಂತಹ ಒಂದು ಸಾಂವಿಧಾನಿಕ ಬಿಕ್ಕಟ್ಟು ಬಂದಿದೆ ಎಂದು ಸ್ಪೀಕರ್ ಬೇಸರ ವ್ಯಕ್ತಪಡಿಸಿದರು.