ಶೌಚಾಲಯ ಬಳಕೆಗೆ ವಿಶೇಷ ಜಾಗೃತಿ ಆಂದೋಲನ ರೂಪಿಸಿ- ಸಚಿವ ಕೃಷ್ಣ ಭೈರೇಗೌಡ
ಈ ವರ್ಷ ಧಾರವಾಡ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನಿಷ್ಠ 100 ಚೆಕ್ ಡ್ಯಾಮುಗಳನ್ನಾದರೂ ನಿರ್ಮಿಸಲೇಬೇಕು ಎಂದು ಸಚಿವರಾದ ಕೃಷ್ಣ ಭೈರೇಗೌಡ ಸೂಚಿಸಿದರು.
ಧಾರವಾಡ: ಸ್ವಚ್ಛ ಭಾರತ ಮಿಷನ್ ಅಡಿ ನಿರ್ಮಿಸಲಾಗಿರುವ ಶೌಚಾಲಯಗಳನ್ನು ಬಳಸಲು ಆಂದೋಲನದ ಮಾದರಿಯಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಾರ್ವಜನಿಕರಲ್ಲಿ ಈ ಕುರಿತು ಇರುವ ಮನೋಭಾವ, ರೂಢಿಗಳನ್ನು ಬದಲಾಯಿಸಲು ಮಾಹಿತಿ, ಶಿಕ್ಷಣ ಹಾಗೂ ಸಂವಹನ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತರಾಜ್ ಹಾಗೂ ಕಾನೂನು ಸಚಿವರಾದ ಕೃಷ್ಣ ಭೈರೇಗೌಡ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆ.29ರಂದು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗವು ಎನ್ ಆರ್ ಡಿ ಡಬ್ಲು ಪಿ, ಎಸ್ ಡಿ ಪಿ, ಟಾಸ್ಕ್ ಫೋರ್ಸ್ ಮತ್ತಿತರ ಕಾರ್ಯಕ್ರಮಗಳಡಿ ಕೈಗೊಂಡ ಕಾಮಗಾರಿಗಳ ಹಣ ಪಾವತಿಯಲ್ಲಿ ದೀರ್ಘ ಕಾಲೀನ ವಿಳಂಬವಾಗಬಾರದು ಎಂದರು.
2016-17ರ ಕಾಮಗಾರಿಗಳ ವೆಚ್ಚವು ಮಾರ್ಚ್ 2014 ರವರೆಗೂ ಪಾವತಿಯಾಗದಿರುವದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೃಷ್ಣ ಬೈರೇಗೌಡ, ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಗೆ ಒಂದು ವಿಶೇಷ ಯೋಜನೆ ತಯಾರಿಸಿ:
ಶೌಚಾಲಯಗಳನ್ನು ಕಟ್ಟಿದ ಬಳಿಕ ಅವುಗಳ ಬಗ್ಗೆ ಹೆಚ್ಚು ಐಇಸಿ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಧಾರವಾಡ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರ ಸಲಹೆಗಳನ್ನು ಮತ್ತು ಸರ್ಕಾರೇತರ ಅಭಿವೃದ್ಧಿ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲೆಗೆ ಒಂದು ವಿಶೇಷ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಿ. ಎರಡು ಗ್ರಾ.ಪಂ. ಗಳನ್ನು ಸೇರಿಸಿ ಒಂದು ಕ್ಲಸ್ಟರ್ ಮಾಡಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಬೇಕು.
ಕಸ ವಿಲೇವಾರಿ ಬಗ್ಗೆ ಜಾಗೃತಿ:
ಹಸಿ ಕಸ, ಒಣ ಕಸ ನಿರ್ವಹಣೆ, ವಿಲೇವಾರಿ ಸ್ವಚ್ಚತೆ ಬಗೆಗೆ ಜನರ ಅಧಿಕಾರಿಗಳು ಹೊಸ ಪ್ರಯೋಗಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಚುನಾಯಿತ ಪ್ರತಿನಿಧಿಗಳು ನಮ್ಮ ಹಕ್ಕು, ಕರ್ತವ್ಯಗಳನ್ನು ಅರಿತುಕೊಂಡು ಅಧಿಕಾರಿಗಳಿಂದ ಕೆಲಸ ಪಡೆಯಬೇಕು. ಸಂವಿಧಾನ ಹಾಗೂ ಪಂಚಾಯತ್ ರಾಜ್ ಕಾಯಿದೆಯಲ್ಲಿ ಎಲ್ಲಾ ಅಧಿಕಾರ ಮತ್ತು ಜವಾಬ್ದಾರಿಗಳು ವಿವರಿಸಲ್ಪಟ್ಟಿವೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ನರೇಗಾ ಯೋಜನೆಯಡಿಯಲ್ಲಿ ನಾಲಾ ಅಭಿವೃದ್ಧಿ:
ನರೇಗಾ ಯೋಜನೆಯಡಿಯಲ್ಲಿ ನಾಲಾ ಅಭಿವೃದ್ಧಿ ಸೇರಿಸಿ ಚೆಕ್ ಡ್ಯಾಮುಗಳನ್ನು ನಿರ್ಮಿಸುವ ವಿಶೇಷ ಪ್ಯಾಕೇಜ್ ತಯಾರಿಸಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಿ. ಮುಂದಿನ ಗ್ರಾಮಸಭೆಯವರೆಗೂ ಕಾಯಬೇಡಿ. ಜಲಸಂರಕ್ಷಣೆಯ ಕಾರ್ಯ ಆದ್ಯತೆಯ ಮೇಲೆ ನಡೆಯಬೇಕು. ಈ ವರ್ಷ ಧಾರವಾಡ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕನಿಷ್ಠ 100 ಚೆಕ್ ಡ್ಯಾಮುಗಳನ್ನಾದರೂ ನಿರ್ಮಿಸಲೇಬೇಕು ಎಂದು ಸಚಿವರಾದ ಕೃಷ್ಣ ಭೈರೇಗೌಡ ಸೂಚಿಸಿದರು.