ಸಿದ್ಧಗಂಗಾ ಶ್ರೀ ಶಿವೈಕ್ಯ: ಮಠದ ಸುತ್ತ ಮುತ್ತ ಬಿಗಿ ಬಂದೋಬಸ್ತ್
ನಾಳೆ ಸಂಜೆ 4:30 ಕ್ಕೆ ಕ್ರಿಯಾ ಸಮಾಧಿ
ತುಮಕೂರು: ಶತಾಯುಷಿ ತುಮಕೂರು ಸಿದ್ಧಗಂಗಾ ಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಸಿದ್ಧಗಂಗಾ ಮಠದ ಸುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಭಾರಿ ಸಂಖ್ಯೆಯಲ್ಲಿ ಬ್ಯಾರಿಕೇಡ್ ಗಳನ್ನೂ ಅಳವಡಿಸಲಾಗಿದೆ. ತುಮಕೂರು ನಗರದಾದ್ಯಂತ 20 ಸಾವಿರ ಪೊಲೀಸರ ನಿಯೋಜಿಸಿದ್ದಲ್ಲದೇ, ಬೇರೆ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.
ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಮಠಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಒದಗಿಸುವಂತೆ ಐಜಿಪಿ ನೀಲಮಣಿರಾಜು ಅವರಿಗೆ ಸಿಎಂ ಸೂಚಿಸಿದ್ದಾರೆ. ಇದೀಗ ಐಜಿಪಿ ನೀಲಮಣಿರಾಜು ಆದೇಶದಂತೆ ಭದ್ರತೆ ಹೆಚ್ಚಿಸಲಾಗಿದೆ. ಮೊದಲ ಹಂತದಲ್ಲಿ 2 ಸಾವಿರ ಪೊಲೀಸರನ್ನು ನಿಜೋಜಿಸಲಾಗಿದೆ. ಇನ್ನು ಎರಡನೇ ಹಂತಕ್ಕೆ 1500 ಗೃಹ ರಕ್ಷಕದಳ ಸಿಬ್ಬಂದಿ ನಿಯೋಜನೆ ಮಾಡಲು ಸೂಚನೆ ನೀಡಲಾಗಿದೆ. ಇತರೆ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿಕೊಳ್ಳಲು ಸೂಚಿಸಲಾಗಿದೆ.
ಐಜಿಪಿ ದಯಾನಂದ್ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಮಂಗಳೂರು, ಶಿವಮೊಗ್ಗ, ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ, ಹಾಸನ ಸೇರಿದಂತೆ ಒಟ್ಟು 10 ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿ, ಇನ್‍ಸ್ಪೆಕ್ಟರ್, ಸಬ್‍ಇನ್‍ಸ್ಪೆಕ್ಟರ್ ಸೇರಿದಂತೆ ವಿವಿಧ ಶ್ರೇಣಿಯ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಸಿದ್ದಗಂಗಾ ಮಠಕ್ಕೆ ಎಸ್.ಪಿ.ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ 10 ಪಿಎಸ್‌ಐ, 150 ಸಿವಿಲ್ ಪೇದೆಗಳು, 4 ಡಿಆರ್ ತುಕಡಿಯನ್ನು ಬಂದೊಬಸ್ತ್‌ಗಾಗಿ ನಿಯೋಜಿಸಲಾಗಿದೆ.
ಸಿದ್ಧಗಂಗಾ ಮಠಕ್ಕೆ ಮಾರ್ಗ ಬದಲು:
ಇದಲ್ಲದೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಬದಲು ಮಾಡಿದ್ದು, ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಡೈವರ್ಟ್:
ಬೆಂಗಳೂರು, ದಾವಣಗೆರೆ, ಚಿತ್ರದುರ್ಗದಿಂದ ಬರುವ ವಾಹನ ಮಾರ್ಗ ಬದಲಾಯಿಸಲಾಗಿದ್ದು, ಪೂನಾ- ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಪಥ ಬದಲಿಸಲಾಗಿದೆ. ಶಿರಾದಿಂದ ಹೆದ್ದಾರಿಯ ವಾಹನಗಳನ್ನು ಡೈವರ್ಟ್ ಮಾಡಲಾಗಿದ್ದು ಮಧುಗಿರಿ, ಕೊರಟಗೆರೆ, ದಾಬಸ್ಪೇಟೆ ಮಾರ್ಗದಲ್ಲಿ ಸಂಚಾರ ಕಲ್ಪಿಸಲಾಗಿದೆ.