ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಶತಾಯುಷಿ ಸಿದ್ಧಗಂಗಾ ಶ್ರೀಗಳು
ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಲು ಬಿಜಿಎಸ್ ಆಸ್ಪತ್ರೆಗೆ ಭೇಟಿ ನೀಡಿದ ಸಿದ್ದರಾಮಯ್ಯ.
ಬೆಂಗಳೂರು: ಶತಾಯುಷಿ ಸಿದ್ಧಗಂಗಾ ಶ್ರೀಗಳಿಗೆ(ಶ್ರೀ ಶಿವಕುಮಾರ ಸ್ವಾಮೀಜಿ) ನಿಮೊನಿಯಾದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕಳೆದ ರಾತ್ರಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಶ್ರೀಗಳಿಗೆ ಎಲ್ಲಾ ರೀತಿಯ ತಪಾಸಣೆ ಮಾಡಲಾಗುತ್ತಿದ್ದು, ಶ್ರೀಗಳ ವಾರ್ಡ್ ನಲ್ಲಿ ಮಠದ ರೀತಿಯ ವಾತಾವರಣ ಸೃಷ್ಠಿ ಮಾಡಲಾಗಿದೆ. ಚಿಕಿತ್ಸೆಗೆ ಶ್ರೀಗಳು ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜಿಎಸ್ ಆಸ್ಪತ್ರೆಗೆ ಭೇಟಿ ನೀಡಿ ಸಿದ್ದಗಂಗಾ ಮಠಾಧೀಶರಾದ ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ವಿಚಾರಿಸಿದರು. ಅವರು ಶೀಘ್ರ ಗುಣಮುಖರಾಗುವಂತೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಪ್ರಾರ್ಥಿಸಿದರು. ಜೊತೆಗೆ ಶ್ರೀಗಳಿಗೆ ಚಿಕತ್ಸೆ ನೀಡುತ್ತಿರುವ ಬಗ್ಗೆ ಮುಖ್ಯಮಂತ್ರಿಯವರು ವೈದ್ಯರಿಂದ ಮಾಹಿತಿ ಪಡೆದುಕೊಂಡರು.
ಬೆಳಿಗ್ಗೆ ಜಯಮೃತ್ಯುಂಜಯ ಶ್ರೀಗಳು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.
ಶ್ರೀಗಳ ಆರೋಗ್ಯದ ಬಗ್ಗೆ ಕಿರಿಯ ಶ್ರೀ ಹೇಳಿಕೆ...
ಸ್ವಾಮೀಜಿ ಆರೋಗ್ಯದ ಬಗ್ಗೆ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಅವರ ಬಿಪಿಯಲ್ಲಿ ಸ್ವಲ್ಪ ಬದಲಾವಣೆ ಇದೆ, ಯಾರೂ ಹೆದರಬೇಡಿ, ಶ್ರೀಗಳ ಆರೋಗ್ಯ ಬೇಗ ಸುಧಾರಿಸುತ್ತದೆ ಎಂದು ಕಿರಿಯ ಸ್ವಾಮಿಜಿ ತಿಳಿಸಿದ್ದಾರೆ.
ಶ್ರೀಗಳ ಆರೋಗ್ಯದ ಬಗ್ಗೆ ಡಾ. ರವೀಂದ್ರ ಹೇಳಿಕೆ...
ಶ್ರೀಗಳ ಕಿಡ್ನಿ ಫಂಕ್ಷನ್ ನಲ್ಲಿ ಒಂದಷ್ಟು ವ್ಯತ್ಯಯವಾಗಿದೆ. ಸಿಟಿ ಸ್ಕ್ಯಾನ್ ಮಾಡಬೇಕಿದೆ, ಅದರ ವರದಿ ಬಂದ ನಂತರ ಮತ್ತಷ್ಟು ವಿಚಾರ ತಿಳಿಯಲಿದೆ. ರಕ್ತಪರೀಕ್ಷೆ ರಿಪೋರ್ಟ್ ನಲ್ಲಿ ಸೋಂಕು ತಗುಲಿರುವುದು ಗೊತ್ತಾಗಿದೆ. ಯಾರೂ ಆತಂಕ ಪಡಬೇಕಾಗಿಲ್ಲ, ಅವರಿಗೆ 110 ವರ್ಷ ವಯಸ್ಸಾಗಿದೆ, ಹಾಗಾಗಿ ಈ ಸಮಸ್ಯೆಗಳು ಬರುವುದು ಸಾಮಾನ್ಯ ಎಂದು ಹೇಳಿದರು.