ತುಮಕೂರು : ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಸಿದ್ದಗಂಗಾ ಮಠದ ಪೀಠಾಧ್ಯಕ್ಷ, ಜಗದ್ಗುರು ಶಿವಕುಮಾರ ಸ್ವಾಮೀಜಿ ಅವರ 111ನೇ ವಸಂತಕ್ಕೆ ಕಾಲಿರಿಸಿದ್ದು, ಮಠದ ಆವರಣದಲ್ಲಿ ಸಂಭ್ರಮ ಮನೆಮಾಡಿದೆ. 


COMMERCIAL BREAK
SCROLL TO CONTINUE READING

ಶ್ರೀ ಸಿದ್ದಗಂಗಾ ಮಠದಲ್ಲಿ ಆಯೋಜಿಸಿರುವ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 111ನೇ ಜನ್ಮದಿನೋತ್ಸವ ಮತ್ತು ಗುರುವಂದನಾ ಮಹೋತ್ಸವನ್ನು ಶ್ರೀ ಸುತ್ತೂರು ವೀರಸಿಂಹಾಸನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ. ಆದಿ ಚುಂಚುನಗಿರಿ ಮಠದ ಶ್ರೀ ನಿರ್ಮಾಲಾನಂದ ನಾಥ ಸ್ವಾಮೀಜಿ, ಚಿತ್ರದುರ್ಗ ಬೃಹನ್ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಮತ್ತಿತರರು ಭಾಗವಹಿಸಲಿದ್ದಾರೆ. 


ಶ್ರೀಗಳ ಜನ್ಮದಿನೋತ್ಸವದ ಅಂಗವಾಗಿ ಮಠದ ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಿಲ್ಲೆಯಾದ್ಯಂತ ಶ್ರೀಗಳಿಗೆ ಜನ್ಮದಿನದ ಶುಭಾಶಯ ಕೋರುವ ಕಟೌಟ್'ಗಳು, ಬ್ಯಾನರ್'ಗಳು ಕಂಡುಬರುತ್ತಿವೆ. ತುಮಕೂರಿನ ಟಿಜಿಎಂಸಿ ಬ್ಯಾಂಕ್ ಮುಂಭಾಗ ಶ್ರೀಮಠದ ಚಿತ್ರಣವನ್ನು ರೂಪಿಸಲಾಗಿದೆ. ಸಂಜೆ 5 ಗಂಟೆಯ ನಂತರ ತುಮಕೂರು ನಗರದಲ್ಲಿ ಶ್ರೀಗಳಿಗೆ ಭಕ್ತರಿಂದ ಜನಾಭಿವಂದನೆ ಕಾರ್ಯಕ್ರಮ ಆಯೋಜನೆಗೊಂಡಿದೆ. ಶ್ರೀಗಳ ಸಾವಿರಾರು ಭಕ್ತರು ಸ್ವಯಂ ಪ್ರೇರಿತವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. 


ಇನ್ನು, ರಾಜ್ಯದ ಮೂಲೆ ಮೂಲೆಗಳಿಂದ ಬರುವ ಭಕ್ತರಿಗೆ 9ಕಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸುಮಾರು 1 ಲಕ್ಷ ಭಕ್ತರಿಗೆ ಆಗುವಷ್ಟು ಪಾಯಸ, 250 ಕ್ವಿಂಟಲ್ ಬೋಂದಿ, ಚಿತ್ರಾನ್ನಾ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಮಾಡಲಾಗಿದೆ. ಭಾನುವಾರ ಬೆಳಗ್ಗೆ ಯಿಂದಲೇ ಆರಂಭವಾಗುವ ಪ್ರಸಾದ ಸೇವೆ ರಾತ್ರಿ 11ರವರೆಗೆ ನಿರಂತರವಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಭಕ್ತರ ಆಗಮನದ ನಿರೀಕ್ಷೆ ಇದೆ.