ಸುಸುತ್ರವಾಗಿ ನಡೆದ SSLC ಪರೀಕ್ಷೆ- ಹಿಜಾಬ್ ಗಿಂತ ಶಿಕ್ಷಣವೇ ಮುಖ್ಯ ಎಂಬಂತೆ ಪರೀಕ್ಷೆಗೆ ಹಾಜರಾದ ಮುಸ್ಲಿಂ ವಿದ್ಯಾರ್ಥಿನಿಯರು
ಕೋವಿಡ್ ನಂತರ ಇದೇ ಪ್ರಪ್ರಥಮ ಬಾರಿಗೆ ಸಾಧಾರಣ ರೀತಿಯಲ್ಲೇ SSLC ಪರೀಕ್ಷೆ ನಡೆಸಲಾಗಿದೆ. 8ನೇ ಹಾ ಗೂ 9ನೇ ತರಗತಿಗಳನ್ನು ಆನ್‌ಲೈನ್‌ನಲ್ಲೇ ಅಟೆಂಡ್ ಆಗಿ ಪಾಸ್ ಆಗಿದ್ದ ಲಕ್ಷಾಂತರ ವಿದ್ಯಾರ್ಥಿಗಳು ದೈಹಿಕವಾಗಿ ಹಾಜರಾಗಿ ಇಂದು SSLC ಪರೀಕ್ಷೆ ಬರೆದಿದ್ದಾರೆ.
ಬೆಂಗಳೂರು : ರಾಜ್ಯಾದ್ಯಂತ ಇಂದಿನಿಂದ SSLC ಪರೀಕ್ಷೆ ಆರಂಭವಾಗಿದ್ದು ಏಪ್ರಿಲ್ 11ರವರೆಗೂ ನಡೆಯಲಿದೆ. ವಿದ್ಯಾರ್ಥಿಗಳು ಕೂಡ ಉತ್ಸಾಹ ಹಾಗೂ ಆತಂಕದಿಂದಲೇ ಪರೀಕ್ಷೆಗಳನ್ನು ಎದುರಿಸಿದ್ದಾರೆ. ಪರೀಕ್ಷೆಯ ಮೊದಲನೇ ದಿನ ಆದ ಕಾರಣ ಧೈರ್ಯ ತುಂಬಲು ಶಿಕ್ಷಣ ಸಚಿವರೇ ಖುದ್ದು ಶಾಲೆಗೆ ಭೇಟಿ ನೀಡಿದ್ದರು. ಮತ್ತೊಂದೆಡೆ ಹಿಜಾಬ್‌ಗಿಂತ (hijab)ಶಿಕ್ಷಣ ಮುಖ್ಯ ಅಂತ ಮುಸ್ಲಿಂ ಸಮುದಾಯದ ತಾಯಿಯೊಬ್ಬರು ಕಿವಿಮಾತು ಹೇಳಿದ್ದಾರೆ.
ಕೋವಿಡ್ (Coronavirus) ನಂತರ ಇದೇ ಪ್ರಪ್ರಥಮ ಬಾರಿಗೆ ಸಾಧಾರಣ ರೀತಿಯಲ್ಲೇ SSLC ಪರೀಕ್ಷೆ ನಡೆಸಲಾಗಿದೆ. 8ನೇ ಹಾಗೂ 9ನೇ ತರಗತಿಗಳನ್ನು ಆನ್‌ಲೈನ್‌ನಲ್ಲೇ ಅಟೆಂಡ್ ಆಗಿ ಪಾಸ್ ಆಗಿದ್ದ ಲಕ್ಷಾಂತರ ವಿದ್ಯಾರ್ಥಿಗಳು ದೈಹಿಕವಾಗಿ ಇಂದು SSLC ಪರೀಕ್ಷೆ ಬರೆದಿದ್ದಾರೆ. ಮೊದಲೇ ತಡವಾಗಿ ಆರಂಭವಾಗಿದ್ದ ಶೈಕ್ಷಣಿಕ ವರ್ಷ ಒಂದೆಡೆಯಾದ್ರೆ, ಮತ್ತೊಂದೆಡೆ ಸಿಲಬಸ್ ಬೇಗ ಓದಬೇಕು ಎಂಬ ಒತ್ತಡ ವಿದ್ಯಾರ್ಥಿಗಳ ಮೇಲಿತ್ತು. ಪಠ್ಯದಲ್ಲಿನ ಶೇ.20ರಷ್ಟು ಭಾಗವನ್ನು ಕಡಿತಗೊಳಿಸಲಾಗಿದ್ದರೂ, ಪರೀಕ್ಷೆ ಹೇಗಿರುತ್ತೆ ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಮೂಡಿತ್ತು. ಅವರೆಲ್ಲರಿಗೂ ಧೈರ್ಯ ತುಂಬಲು ಖುದ್ದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh) ಇಂದು ಶಾಲೆಗೆ ಭೇಟಿ ನೀಡಿದ್ದರು. ಅಗ್ರಹಾರ ದಾಸರಹಳ್ಳಿ ಬಳಿಯಿರೋ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹೂ ನೀಡಿ ಶುಭ ಕೋರಿದರು.
ಇದನ್ನೂ ಓದಿ : Harpanahalli Gang: ಬವಾರಿಯಾ, ಬಗಾರಿಯಾ ಬಳಿಕ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟ ಹರಪಹಳ್ಳಿ ಗ್ಯಾಂಗ್!
ಹಿಜಾಬ್‌ಗಿಂತಲೂ ಪರೀಕ್ಷೆ ಹಾಗೂ ಶಿಕ್ಷಣವೇ ಮುಖ್ಯ :
ಮತ್ತೊಂದೆಡೆ ತಿಂಗಳ ಹಿಂದೆಯಷ್ಟೇ ರಾಜ್ಯಾದ್ಯಂತ ಹಿಜಾಬ್ (Hijab) ವಿಚಾರವಾಗಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಹೈಕೋರ್ಟ್ (high Court)ಮೆಟ್ಟಿಲೇರಿದ್ದ ಈ ಪ್ರಕರಣದಲ್ಲಿ, ತರಗತಿಯಲ್ಲಿ ಹಿಜಾಬ್ ಧಾರಣೆ ಅತ್ಯವಶ್ಯವಲ್ಲ ಎಂಬ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಶಿಕ್ಷಣ ಇಲಾಖೆಯೂ ಕೂಡ ಪರೀಕ್ಷಾ ಸಂದರ್ಭದಲ್ಲಿ ಈ ಆದೇಶವನ್ನು ಪಾಲಿಸಬೇಕು ಅಂತ ಸುತ್ತೋಲೆ ಹೊರಡಿಸಿತ್ತು. ಶಾಲೆಯ ಆವರಣದ ಒಳಗೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ವಿಶೇಷ ಕೊಠಡಿಯಲ್ಲಿ ಹಿಜಾಬ್ ತೆಗೆದು ಪರೀಕ್ಷೆಗಳಿಗೆ ತೆರಳಿದರು. ಇದೇ ಸಂದರ್ಭದಲ್ಲಿ ಧರ್ಮ ಪಾಲನೆ ಎಷ್ಟು ಮುಖ್ಯವೋ ಅದಕ್ಕಿಂತ ಶಿಕ್ಷಣ ಹೆಚ್ಚು ಮುಖ್ಯ ಎಂದಿದ್ದಾರೆ ಮುಸ್ಲಿಂ ಸಮುದಾಯಕ್ಕೆ ಸೇರಿದ ತಾಯಿಯೊಬ್ಬರು.
ಹಿಜಾಬ್ ತೆಗೆಯಲು ಒಪ್ಪದ ಮೇಲ್ವಿಚಾರಕಿ ಅಮಾನತು :
ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಪೋಷಕರು ಹೈಕೋರ್ಟ್ ಆದೇಶಕ್ಕೆ ತಲೆಬಾಗಿದ್ದರು. ಅದರಂತೆ ಮುಸ್ಲಿಂ ಹೆಣ್ಣು ಮಕ್ಕಳು ಕೂಡ ಹಿಜಾಬ್ ತೆಗೆದೇ ಪರೀಕ್ಷೆಯನ್ನು ಬರೆದಿದ್ದಾರೆ. ನಗರದ ಯಾವ ಕೇಂದ್ರದಲ್ಲಿಯೂ ಹಿಜಾಬ್ ವಿಚಾರಕ್ಕೆ ಗೊಂದಲ ಆಗಿಲ್ಲ, ಎಂದುಕೊಳ್ಳುವಷ್ಟರಲ್ಲೇ ಹಿಜಾಬ್ ಮತ್ತೆ ಸದ್ದು ಮಾಡಿತ್ತು. ನಗರದ ಮಂಜುನಾಥ ನಗರಲ್ಲಿರೋ ಸಿದ್ದಗಂಗಾ ಶಾಲೆಯಲ್ಲಿ ಪರೀಕ್ಷಾ ಕೊಠಡಿಯ ಮೇಲ್ವಿಚಾರಕಿಯಿಂದಲೇ ಹಿಜಾಬ್ ಗೊಂದಲ ಶುರುವಾಗಿತ್ತು. ಪರೀಕ್ಷೆ ಆರಂಭ ಆಗೋದು 10.30ಕ್ಕೆ. ಅಲ್ಲಿಯವರೆಗೂ ನಾನು ಹಿಜಾಬ್ ತೆಗೆಯೋದಿಲ್ಲ ಅಂತ ಮೇಲ್ವಿಚಾರಕಿ ನೂರ್ ಫಾತಿಮಾ ಹಿರಿಯ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ. ಈ ಕಾರಣದಿಂದ 10.15ಕ್ಕೆ ಅವರನ್ನು ಮೇಲ್ವಿಚಾರಣೆ ಕೆಲಸದಿಂದ ಅಮಾನತು ಮಾಡಲಾಗಿತ್ತು.
ಇದನ್ನೂ ಓದಿ : SSLC ಪರೀಕ್ಷೆ ಬರೆಯುವ ವಿದ್ಯಾರ್ಥಿ ಪೋಟೋಗೆ ತಿಥಿ ಪೂಜೆ ಮಾಡಿದ ದುಷ್ಕರ್ಮಿಗಳು
"ಪರೀಕ್ಷೆ ಅಂದುಕೊಂಡಷ್ಟು ಕಷ್ಟವಿರಲಿಲ್ಲ, ಆದ್ರೆ ಮತ್ತಷ್ಟು ಸಮಯ ಬೇಕಿತ್ತು ":
ಪರೀಕ್ಷಾ ಕೇಂದ್ರಕ್ಕೆ ಭಯದಿಂದಲೇ ಹೋಗಿದ ವಿದ್ಯಾರ್ಥಿಗಳೇ ಪರೀಕ್ಷೆಯ ನಂತರ ನಗುಮೊಗದಿಂದ ಹೊರಬಂದಿದ್ದಾರೆ. ಅಂದುಕೊಂಡಷ್ಟರ ಮಟ್ಟಿಗೆ ಪರೀಕ್ಷೆ ಕಷ್ಟಕರವಾಗಿರಲಿಲ್ಲ. ಕಡಿತಗೊಂಡ ಸಿಲಬಸ್‌ನಿಂದ ಒಂದೂ ಪ್ರಶ್ನೆಯೂ ಬಂದಿಲ್ಲ. ಆದರೆ, ಇನ್ನೊಂದು 15 ನಿಮಿಷ ಹೆಚ್ಚಿನ ಸಮಯ ಬೇಕಿತ್ತು ಎನ್ನುವ ಮಾತು ಕೂಡಾ ಕೇಳಿ ಬಂತು.
ಈ ಸಾಲಿನ ಪರೀಕ್ಷೆಗೆ ರಾಜ್ಯಾದ್ಯಂತ ಒಟ್ಟೂ 8,73,846 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅವರ ಪೈಕಿ 4,52,732 ಬಾಲಕರು, 4,21,110 ಬಾಲಕಿಯರು ಹಾಗು 4 ತೃತೀಯ ಲಿಂಗಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಮೊದಲನೇ ದಿನವಾದ ಇಂದು ಪ್ರಥಮ ಭಾಷೆಯ ಪರೀಕ್ಷೆಯನ್ನು ನಡೆಸಲಾಯಿತು. ಆದ್ರೆ, ಮೊದಲನೇ ದಿನವೇ ಕಾರಣಾಂತರಗಳಿಂದ ಸುಮಾರು 20994 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.