ಧಾರವಾಡ: ನಿನ್ನೆ ಜೂನ್ 29 ರಂದು ನಡೆದ ಎಸ್‍ಎಸ್‍ಎಲ್‍ಸಿ ವಿಜ್ಞಾನ ಪರೀಕ್ಷೆ ಸಮಯದಲ್ಲಿ ನವಲೂರ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ನಿಶ್ಯಕ್ತಿಯಿಂದ ಬಳಲುತ್ತಿದ್ದುದನ್ನು ಕಂಡು ಅರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ತತ್‍ಕ್ಷಣ ಪ್ರಥಮ ಚಿಕಿತ್ಸೆ ನೀಡಿ ಪುನ: ಪರೀಕ್ಷೆಗೆ ಹಾಜರಾಗುವ ಭರವಸೆ ತುಂಬಿದ ಘಟನೆ ಜರುಗಿದೆ.


COMMERCIAL BREAK
SCROLL TO CONTINUE READING

ಜೆಎಸ್‍ಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಹರ್ಷಾ ಕುವೆಳ್ಳಿ ಎಂಬಾತನು ಆಸಕ್ತಿಯಿಂದ ರಾತ್ರಿ ಇಡೀ ಅಭ್ಯಾಸ ಮಾಡಿ ವಿಶ್ರಾಂತಿ ಕೊರತೆಯಿಂದ ಪ್ರಶ್ನೆಪತ್ರಿಕೆ ಹಂಚಿದ 10 ನಿಮಿಷದಲ್ಲಿಯೇ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ತೊಂದರೆ ಅನುಭವಿಸಿದ, ತತ್‍ಕ್ಷಣ ಪ್ರಥಮ ಚಿಕಿತ್ಸೆ ಮಾಡಲಾಯಿತು. ನಂತರದಲ್ಲಿ ಡಿಡಿಪಿಐ ಹಾಗೂ ಬಿಇಓ ರವರಿಗೆ ಮಾಹಿತಿ ನೀಡಿ, ವಿದ್ಯಾರ್ಥಿಯನ್ನು ಪೊಲೀಸ್ ವಾಹನದಲ್ಲಿ ಎಸ್‍ಡಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆಗೊಳಪಡಿಸಲಾಯಿತು. ತದನಂತರ ಮಗುವಿನಲ್ಲಿ ಚೇತರಿಕೆ ಕಂಡ ಬಂದಿತು. ವಿದ್ಯಾರ್ಥಿಯು ಸ್ವ ಇಚ್ಚೆಯಿಂದ ಪರೀಕ್ಷೆ ಬರೆಯಲು ತುಂಬು ವಿಶ್ವಾಸದಿಂದ ಮುಂದಾಗಿದ್ದರಿಂದ ವೈದ್ಯರ ಸಲಹೆಯಂತೆ ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡಿಸಿ ಪರೀಕ್ಷೆ ಬರೆಸಲಾಯಿತು.


ಮಾಹಿತಿ ತಿಳಿದ ತಕ್ಷಣ ಧಾರವಾಡ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿಯವರು ಸ್ಥಳಕ್ಕೆ ಆಗಮಿಸಿ ಸೂಕ್ತ ನಿರ್ದೇಶನ ಒದಗಿಸಿದರು. ಸಕಾಲದಲ್ಲಿ ವಾಹನ ವ್ಯವಸ್ಥೆ ಮಾಡಿಕೊಟ್ಟ ಪೊಲೀಸ್ ಸಿಬ್ಬಂದಿ ಅರ್ಚನಾ ಇಟಿಗಟ್ಟಿ, ಆರೋಗ್ಯ ಇಲಾಖೆ ಸಿಬ್ಬಂದಿ ನಂದಾ ಲುಕ್ಕಾ ಹಾಗೂ ಪರೀಕ್ಷಾ ಕೇಂದ್ರದ ಮುಖ್ಯಸ್ಥರಾದ ಪಿ.ಎಂ. ದೊಡ್ಡಮನಿ ಹಾಗೂ ನೋಡಲ್ ಅಧಿಕಾರಿಗಳಾದ ಜೆ.ಎ. ಕಾರೇಕರ ಹಾಗೂ ಇತರೆ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ಲಾಘಿಸಿದರು.