ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ; ಹಾಸನಕ್ಕೆ ಮೊದಲ ಸ್ಥಾನ
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಹಾಸನ ಜಿಲ್ಲೆ ಉತ್ತಮ ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರು: ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಹಾಸನ ಜಿಲ್ಲೆ ಉತ್ತಮ ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಲಭ್ಯವಾಗಿದೆ.
ಮಲ್ಲೇಶ್ವರಂನ ಎಸ್ಸೆಸ್ಸೆಲಿ ಬೋರ್ಡ್ ನಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಇಂದು ಫಲಿತಾಂಶ ಪ್ರಕಟಿಸಿದ್ದಾರೆ. ಕಳೆದ ಬಾರಿ ಶೇಕಡ 71.93 ಫಲಿತಾಂಶ ಬಂದಿತ್ತು. 2019ರಲ್ಲಿ ಶೇ 73.70 ಫಲಿತಾಂಶ ಬಂದಿದೆ. ಇನ್ನು ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಶೇ 79.59 ರಷ್ಟು ಬಾಲಕಿಯರು ಉತೀರ್ಣರಾಗಿದ್ದು, ಶೇ.68.46 ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ. ಹಾಸನ ಮೊದಲ ಸ್ಥಾನ, ರಾಮನಗರ ದ್ವಿತೀಯ, ಬೆಂಗಳೂರು ಗ್ರಾಮಾಂತರ ಮೂರನೇ ಸ್ಥಾನ, ಉತ್ತರಕನ್ನಡ ನಾಲ್ಕನೇ ಸ್ಥಾನ, ಉಡುಪಿ 5 ನೇ ಸ್ಥಾನ, ಚಿಕ್ಕೋಡಿ 6 ನೇ ಸ್ಥಾನ ಪಡೆದಿದೆ ಎಂದಿದ್ದಾರೆ.
ಈ ಬಾರಿ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಟಾಪರ್ ಗಳಾಗಿದ್ದು, ಆನೇಕಲ್‌ನ ಸೆಂಟ್ ಫಿಲೋಮಿನಾ ಹೈ ಸ್ಕೂಲ್‌ನ ಡಿ. ಸೃಜನಾ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕೊಲಾಬಾ ವಿಥೋಬ್ ಶಾನಭಾಗ್ ಕಲ್ಬಾಗ್‌ಕರ್ ನಾಗಾಂಜಲಿ ಪರಮೇಶ್ವರ ನಾಯ್ಕ್ 625 ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ ಸೈಟ್ www.kaceb.kar.nic.in ಮತ್ತು www.karresults.nic.inನಲ್ಲಿ ಮಧ್ಯಾಹ್ನ 1 ಗಂಟೆ ಬಳಿಕ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಫಲಿತಾಂಶ ಪಡೆಯಬಹುದು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್ 21ರಿಂದ ಪೂರಕ ಪರೀಕ್ಷೆಗಳು ನಡೆಯಲಿದೆ ಎಂದು ಅವರು ಹೇಳಿದರು.
ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆಗೆ 8,41,666 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದರು.