ಅಮಿತ್ ಶಾ ಭೇಟಿಗಾಗಿ ದೆಹಲಿಗೆ ಆಗಮಿಸಿದ ರಾಜ್ಯ ಬಿಜೆಪಿ ನಿಯೋಗ: ಬಿಜೆಪಿ ಚಿತ್ತ ವರಿಷ್ಠರತ್ತ!
ಮೈತ್ರಿ ಸರಕಾರ ಪತನವಾದ ಬೆನ್ನಲ್ಲೇ ಸರಕಾರ ರಚನೆಗೆ ಬಗ್ಗೆ ಉತ್ಸುಕವಾಗಿರುವ ಕಮಲ ಪಾಳಯ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.
ನವದೆಹಲಿ: ಮೈತ್ರಿ ಸರಕಾರ ಪತನವಾದ ಬೆನ್ನಲ್ಲೇ ಸರಕಾರ ರಚನೆಗೆ ಬಗ್ಗೆ ಉತ್ಸುಕವಾಗಿರುವ ಕಮಲ ಪಾಳಯ, ಈ ಹಿಂದೆ ಸರ್ಕಾರ ರಚನೆ ಸಂದರ್ಭದಲ್ಲಿ ಆತುರವಾಗಿ ಕೈಗೊಂಡ ಕ್ರಮಗಳಿಂದ ಬುದ್ದಿ ಕಲಿತಿರುವ ಬಿಜೆಪಿ, ಈ ಬಾರಿ ಸರ್ಕಾರ ರಚನೆಯಲ್ಲಿ ಯಾವುದೇ ರೀತಿಯ ತೊಡಕುಗಳಾಗದಂತೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.
ಸ್ಪೀಕರ್ಗೆ ರಾಜೀನಾಮೆ ನೀಡಿರುವ 15 ಬಂಡಾಯ ಶಾಸಕರ ವಿಚಾರ ಇತ್ಯರ್ಥವಾಗುವವರೆಗೂ ಹೊಸ ಸರ್ಕಾರ ರಚನೆ ಮಾಡಲು ಬಿಜೆಪಿಗೆ ರಾಜ್ಯಪಾಲರು ಆಹ್ವಾನ ನೀಡುವುದು ಅನುಮಾನ ಎನ್ನಲಾಗಿದೆ. ಹಾಗಾಗಿ, ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಪೂರ್ಣಗೊಂಡ ನಂತರದಲ್ಲಿ ಹೊಸ ಸರ್ಕಾರ ರಚನೆಗೆ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ. ಅಧಿಕಾರದ ಹಪಾಹಪಿಗೆ ಕಟ್ಟುಬಿದ್ದು ಮುಜುಗರಕ್ಕೊಳಗಾಗುವ ಸನ್ನಿವೇಶ ತಂದುಕೊಳ್ಳದೆ ಪರಿಸ್ಥಿತಿ ನಮ್ಮ ಪರವಾಗಿದೆ ಎಂಬ ದೃಢತೆ ಸಿಕ್ಕ ಬಳಿಕವಷ್ಟೇ ಸರ್ಕಾರ ರಚನೆಗೆ ಕೈ ಹಾಕೋಣ ಎಂದು ಕೇಂದ್ರ ನಾಯಕರು ನಿರ್ದೇಶನ ನೀಡಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿ, ಸರ್ಕಾರ ರಚನೆ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸುವ ಸಲುವಾಗಿ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಅರವಿಂದ್ ಲಿಂಬಾವಳಿ, ಮಾಧುಸ್ವಾಮಿ, ವಿಜಯೇಂದ್ರ, ಕೆ.ಜಿ. ಬೋಪಯ್ಯ ನಾಯಕರನ್ನು ಒಳಗೊಂಡ ಕರ್ನಾಟಕ ಬಿಜೆಪಿ ನಿಯೋಗ ಗುರುವಾರ ದೆಹಲಿಗೆ ತಲುಪಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಕುರಿತು ಅಮಿತ್ ಶಾ ಯಾವ ನಡೆ ಅನುಸರಿಸಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದ್ದು, ಇದೀಗ ಬಿಜೆಪಿ ಚಿತ್ತ ವರಿಷ್ಠರತ್ತ ನೆಟ್ಟಿದೆ.
ದೆಹಲಿ ತಲುಪಿರುವ ರಾಜ್ಯ ಬಿಜೆಪಿ ನಿಯೋಗವು ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿದ್ದು, ಕರ್ನಾಟಕದಲ್ಲಿ ಸರ್ಕಾರ ರಚಿಸುವ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.
"ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ನಮ್ಮ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜಿ ಅವರೊಂದಿಗೆ ಚರ್ಚಿಸಲು ನಾವು ಇಲ್ಲಿಗೆ ಬಂದಿದ್ದೇವೆ" ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ದೆಹಲಿಯಲ್ಲಿ ತಿಳಿಸಿದ್ದಾರೆ.
"ಕರ್ನಾಟಕದ ಪರಿಸ್ಥಿತಿ ನಿಮಗೆ ತಿಳಿದಿದೆ. ಹೊಸ ಸರ್ಕಾರ ಬರಬೇಕಿದೆ. ಹಿಂದಿನ ಸರ್ಕಾರ ಬಹುಮತವನ್ನು ಕಳೆದುಕೊಂಡಿದೆ ಮತ್ತು ಅವರು ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಮ್ಮ ಪಕ್ಷವು ಸರ್ಕಾರ ರಚಿಸುವ ಬಗ್ಗೆ ನಾವು ವರಿಷ್ಠರ ಸಲಹೆಯನ್ನು ತೆಗೆದುಕೊಳ್ಳುತ್ತೇವೆ. ಅದಕ್ಕೆ ಸಂಬಂಧಿಸಿದಂತೆ, ನಮ್ಮ ನಿಯೋಗ ದೆಹಲಿಗೆ ಬಂದಿದೆ" ಎಂದು ಬಿಜೆಪಿಯ ಮತ್ತೊಬ್ಬ ಮುಖಂಡ ಅರವಿಂದ್ ಲಿಂಬಾವಳಿ ಹೇಳಿದ್ದಾರೆ.
ಬಂಡಾಯ ಶಾಸಕರ ರಾಜೀನಾಮೆ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳದ ಕಾರಣ ಬಿಜೆಪಿ ಕಾಯುತ್ತಿದೆಯೇ ಎಂದು ಕೇಳಿದಾಗ, "ಅದು ಸಮಸ್ಯೆಯಲ್ಲ. ಬಹುಶಃ ಒಂದು ವಿಷಯವಾಗಿದೆ" ಎಂದು ಅವರು ಪ್ರತಿಕ್ರಿಯಿಸಿದರು.