ಗೌರಿ ಲಂಕೇಶ್ ಹಂತಕ ಪತ್ತೆಗೆ ಎಸ್ಐಟಿ ರಚಿಸಿದ ರಾಜ್ಯ ಸರ್ಕಾರ
ಐಜಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ಸ್ಪಷ್ಟ ಪಡಿಸಿದ ಸಿಎಂ
ಬೆಂಗಳೂರು: ವಿಧಾನ ಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆ ನಡೆಸಿದ ಹಂತಕರ ಪತ್ತೆಗಾಗಿ ಐಜಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಆದಷ್ಟು ಬೇಗ ಹಂತಕರನ್ನು ಪತ್ತೆ ಹಚ್ಚುವ ಕೆಲಸವನ್ನು ಸರ್ಕಾರ ಮತ್ತು ಪೋಲೀಸ್ ಇಲಾಖೆ ಮಾಡಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಪ್ರಗತಿಪರ ಚಿಂತಕರೆಲ್ಲರಿಗೂ ಪೋಲಿಸ್ ಭದ್ರತೆ ಒದಗಿಸುವ ಬಗ್ಗೆ ಸೂಚನೆ ನೀಡಲಾಗಿದೆ. ಪಿ.ಲಂಕೇಶ್ ಕಾಲದಿಂದಲೂ ಪರಿಚಿತರಾಗಿದ್ದ ಗೌರಿ ಲಂಕೇಶ್ ಬಹಳಷ್ಟು ಬಾರಿ ನನ್ನನ್ನು ಭೇಟಿಯಾಗಿದ್ದರು. ಆದರೆ ಎಂದೂ ತಮಗೆ ಜೀವ ಬೆದರಿಕೆ ಇರುವ ಬಗ್ಗೆ ತಿಳಿಸಿರಲಿಲ್ಲ ಎಂದು ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಒಬ್ಬ ವ್ಯಕ್ತಿ ಗೌರಿ ಲಂಕೇಶ್ ಗೆ ಗುಂಡು ಹಾರಿಸುತ್ತಿರುವುದು ತಿಳಿದುಬಂದಿದ್ದು, ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದರಿಂದ ಮುಖ ತಿಳಿದುಬಂದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು. ಇದೇ ವೇಳೆ ಪ್ರಕರಣವನ್ನು ಸಿಬಿಐ ಗೆ ವಹಿಸುವ ವಿಷಯವನ್ನು ಸಿದ್ದರಾಮಯ್ಯ ತಳ್ಳಿಹಾಕಿದರು.