ರಾಜ್ಯ ಸರ್ಕಾರ ಹಣಕಾಸು ನಿರ್ವಹಣೆಯಲ್ಲಿ ವಿಫಲ: ಬಸವರಾಜ ಬೊಮ್ಮಾಯಿ
Basavaraj Bommai: ಕಳೆದ ವರ್ಷ 3.27 ಲಕ್ಷ ಕೋಟಿಯಲ್ಲಿ ಇವರು ಖರ್ಚು ಮಾಡಿರುವುದು ಸರಾಸರಿ ಶೇ 50% ರಷ್ಟು ಮಾತ್ರ. ಮತ್ತು 103% ಅನುತ್ಪಾದಕ ವೆಚ್ಚವಾಗಿರುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರ ಹಣಕಾಸು ನಿರ್ವಹಣೆಯಲ್ಲಿ ವಿಫಲವಾಗಿದ್ದು, ಮುಖ್ಯಮಂತ್ರಿಗಳು ರಾಜ್ಯದ ಶೂನ್ಯ ಪ್ರಗತಿಯನ್ನೇ ತಮ್ಮ ಸಾಧನೆ ಎಂದು ಬಿಂಬಿಸುತ್ತಿರುವುದು ವಿಪರ್ಯಾಸ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯ ಸರ್ಕಾರದ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಉತ್ತರಕ್ಕೆ ಮಾಜಿ ಸಿಎಂ ಬಸಬರಾಜ ಬೊಮ್ಮಾಯಿ ಪತ್ರಿಕಾ ಪ್ರಕಟಣೆಯ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಬಜೆಟ್ ಗಿಂತ 62 ಸಾವಿರ ಕೋಟಿ ಬಜೆಟ್ ಗಾತ್ರ ಹೆಚ್ಚಳ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಬಂಡವಾಳ ವೆಚ್ಚ ಕಳೆದ ವರ್ಷ 54 ಸಾವಿರ ಕೋಟಿ ಇತ್ತು ಎಂದರು.
ಈ ವರ್ಷ 55 ಸಾವಿರ ಕೋಟಿ ಮಾತ್ರ ಇದೆ. ಕೇವಲ 1 ಸಾವಿರ ಕೋಟಿ ಮಾತ್ರ ಹೆಚ್ಚಳವಾಗಿದೆ. ಒಟ್ಟು ರೆವೆನ್ಯೂ ಆದಾಯದಲ್ಲಿ 103 % ಅನುತ್ಪಾದಕ ವೆಚ್ಚ ಮಾಡುತ್ತಿರುವ ಸಿದ್ದರಾಮಯ್ಯ ಅವರ ಬಜೆಟ್ಟು, ಯಾವ ಅಭಿವೃದ್ಧಿ ಸಾಧನೆಯನ್ನು ಬಜೆಟ್ ಹೆಚ್ಚಳ ಮುಖಾಂತರ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಬಜೆಟ್ ಗಾತ್ರ ಹೆಚ್ಚಾಗಿರುವಂಥದ್ದು ಸರ್ಕಾರಿ ನೌಕರ ಸಂಬಳ, ಭತ್ಯೆ ಪಿಂಚಣಿ, ಸಾಲದ ಮರುಪಾವತಿ, ಗ್ಯಾರೆಂಟಿ ಗಳು ಮತ್ತು ಇತರ ಸಬ್ಸಿಡಿಗಳಿಗೆ ಹೋಗುತ್ತಿದ್ದು, 1.05 ಲಕ್ಷ ಕೋಟಿ ಸಾಲದ ಹೊರೆಯನ್ನು ರಾಜ್ಯದ ಜನತೆಯ ಮೇಲೆ ಹೊರೆಸಿರುವುದು ಎಷ್ಟರ ಮಟ್ಟಿಗೆ ನ್ಯಾಯ ಸಮ್ಮತ? ಅಲ್ಲದೇ ಬಜೆಟ್ ನಲ್ಲಿರುವ 27 ಸಾವಿರ ಕೋಟಿ ಕೊರತೆಯನ್ನು ಹೇಗೆ ನೀಗಿಸುತ್ತಾರೆ ಎನ್ನುವುದಕ್ಕೆ ಉತ್ತರವಿಲ್ಲ. ಇದೊಂದು ಯೋಜನೆ, ಯೋಚನೆ ರಹಿತವಾಗಿರುವ ಮತ್ತು ಗುರಿ ಮತ್ತು ದಿಕ್ಕಿಲ್ಲದ ಒಂದು ಬಜೆಟ್ ಆಗಿದೆ ಎಂದು ಆರೋಪಿಸಿದ್ದಾರೆ.
ಪ್ರಸಕ್ತ ವರ್ಷ ಜಿಡಿಪಿ 28 ಸಾವಿರ ಕೋಟಿ ಆಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಇದು ರಾಜ್ಯದ ಜನರ ಉತ್ಪಾದನೆಯ ಚಟುವಟಿಕೆಯ ಮೇಲೆ ನಿಂತಿರುತ್ತದೆ. ಕಳೆದ ವರ್ಷ 3.27 ಲಕ್ಷ ಕೋಟಿಯಲ್ಲಿ ಇವರು ಖರ್ಚು ಮಾಡಿರುವುದು ಸರಾಸರಿ ಶೇ 50% ರಷ್ಟು ಮಾತ್ರ. ಮತ್ತು 103% ಅನುತ್ಪಾದಕ ವೆಚ್ಚವಾಗಿರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಗೆ ಉಪರಾಷ್ಟ್ರಪತಿ ಭೇಟಿ, ಸಚಿವ ಪ್ರಹ್ಲಾದ ಜೋಶಿ ಆತ್ಮೀಯ ಸ್ವಾಗತ
ಅವರೇ ಬಜೆಟ್ ನಲ್ಲಿ ಹೇಳಿರುವಂತೆ 2023-24 ರ ಬಜೆಟ್ಟಿನಲ್ಲಿ 10 ಸಾವಿರ ಕೋಟಿ ರೂ. ಕಡಿಮೆ ವೆಚ್ಚ ಮಾಡಲಾಗುವುದು. ಹೀಗೆ ಆದಾಯ ಮತ್ತು ವೆಚ್ಚದಲ್ಲಿ ವಿಫಲವಾಗಿರುವ ಸಿದ್ದರಾಮಯ್ಯ ಸರ್ಕಾರ ಮತ್ತು ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿರುವುದು ಸ್ಪಷ್ಟವಾಗಿದೆ. ಜಿಡಿಪಿಗೆ ಇವರ ಸರ್ಕಾರದ ಯಾವುದೇ ಕೊಡುಗೆ ಇಲ್ಲ. ಜಿಡಿಪಿ ಹೆಚ್ಚಳ ವಾಗುವುದನ್ನು ತಮ್ಮ ಸಾಧನೆ ಎಂದು ಹೇಳುವುದು ರಾಜ್ಯದ ಜನರ ದುಡಿಮೆಗೆ ಮಾಡುವ ಅವಮಾನವಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಟೀಕೆ ಮಾಡುವ ಮುಖಾಂತರ ತಮ್ಮ ರಾಜಕೀಯ ರೊಟ್ಟಿ ಸುಟ್ಟುಕೊಳ್ಳುವ ವಿಫಲ ಪ್ರಯತ್ನ ಬಜೆಟ್ ಉತ್ತರದಲ್ಲಿ ಸಿಎಂ ಮಾಡಿದ್ದಾರೆ. ಅಂಕಿ ಅಂಶಗಳು ಬಹಳ ಸ್ಪಷ್ಟವಾಗಿದೆ. 14 ನೇ ಹಣಕಾಸಿನಲ್ಲಿ ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ತೆರಿಗೆ ಪಾಲು 1,51,309 ಕೋಟಿ ಎನ್ ಡಿಎ ಅವಧಿ 15ನೇ ಹಣಕಾಸಿನಲ್ಕಿ ಈಗಾಗಲೇ 1.16 ಲಕ್ಷ ಕೋಟಿ ಬಿಡುಗಡೆಯಾಗಿದೆ. 15 ನೇ ಹಣಕಾಸಿನ ಇನ್ನು ಎರಡು ವರ್ಷ ಅವಧಿಯಲ್ಲಿ ಇನ್ನು ಒಂದು ಲಕ್ಷ ಕೊಟಿ ಬರಲಿದೆ. ಅಂದರೆ ಸುಮಾರು 2.25 ಲಕ್ಷ ಕೋಟಿ ರೂ. 15 ನೇ ಹಣಕಾಸು ಅವಧಿಯಲ್ಲಿ ಬರಲಿದೆ. ಇದು ವಾಸ್ತವಾಂಶ. ಕೇವಲ ರಾಜಕೀಯಕ್ಕಾಗಿ ಸಿದ್ದರಾಮಯ್ಯ ಅವರು 1.50 ಲಕ್ಷ ಕೋಟಿ ರೂ. 2.25 ಲಕ್ಷ ಕೋಟಿಗಿಂತ ಹೆಚ್ಚು ಎಂಬ ಸುಳ್ಳು ವಾದವನ್ನು ಮಂಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅದೇ ರೀತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಕರ್ನಾಟಕದಲ್ಲಿ 6.51 ಲಕ್ಷ ಮನೆಗಳಿಗೆ ಅನುದಾನ ಕೊಟ್ಡಿದ್ದು ಸುಮಾರು ನಗರ ಮತ್ತು ಗ್ರಾಮೀಣ ಬಡವರ ಮನೆಗೆ ಸುಮಾರು 6689 ಕೋಟಿ ರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 53 ಲಕ್ಷ ರೈತರಿಗೆ 13669 ಕೊಟಿ, ರಾಷ್ಟ್ರೀಯ ಹೆದ್ದಾರಿಗೆ 6005 ಕಿ.ಮೀ. ರಾ. ಹೆದ್ದಾರಿ ಅಭಿವೃದ್ದಿಗೆ 97,246 ಕೋಟಿ ರೂ. ಮುದ್ರಾ ಯೋಜನೆಯಡಿ 60 ಲಕ್ಷ ವಿದ್ಯಾರ್ಥಿಗಳಿಗೆ ಸಾಲ ನೀಡಿದ್ದಾರೆ. ಜಲಜೀವನ್ ಮಿಷನ್ 62 ಲಕ್ಷಮನೆಗಳಿಗೆ ನಲ್ಲಿ ಸಂಪರ್ಕ, ಆಯುಷ್ಮಾನ್ ಭಾರತ್ ಯೋಜನೆಯಡಿ 60 ಲಕ್ಷ ಜನರು ಪ್ರಯೋಜನ ಪಡೆದುಕೊಂಡಿದ್ದಾರೆ.ಇದ್ಯಾವುದು ಕೂಡ ಮುಖ್ಯಮಂತ್ರಿ ಗಳ ರಾಜಕೀಯ ಕಾಮಾಲೆ ಕಣ್ಣಿಗೆ ಕಾಣಿಸುತ್ತಿಲ್ಲ. ವಿಧಾನಸೌಧದಲ್ಲಿ ಜನರಿಗೆ ಸುಳ್ಳು ಹೇಳುವ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕುಖ್ಯಾತಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ!
14 ನೇ ಹಣಕಾಸಿನಿಂದ 15 ನೇ ಹಣಕಾಸು ಆಯೋಗದಲ್ಲಿ ತೆರಿಗೆ ಪಾಲಿನಲ್ಲಿ ಕಡಿಮೆಯಾಗಲು ನೇರವಾಗಿ ಸಿದ್ದರಾಮಯ್ಯ ಅವರೇ ಕಾರಣ 15 ನೇ ಹಣಕಾಸಿನ ಕಾರ್ಯ ಚಟುವಟಿಕೆ ನಡೆಯುವಾಗ ಇಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇತ್ತು.ರಾಜ್ಯದ ಸಮಗ್ರ ಆರ್ಥಿಕ ಚಿತ್ರ ಕೊಡಲು ಸಂಪೂರ್ಣ ವಿಫಲರಾದರು.15 ನೇ ಹಣಕಾಸಿನ ಅಂತಿಮಗೊಳಿಸುವ ಸಭೆಯಲ್ಲಿ ಸಮ್ಮಿಶ್ರ ಸರ್ಕಾರದಲ್ಲಿದ್ದ ಕಾಂಗ್ರೆಸ್ದಿನ ಐದು ಸಚಿವರು ಪಾಲ್ಗೊಂಡಿದ್ದರು ಅಲ್ಲಿ ಬಾಯಿಗೆ ಬೀಗ ಹಾಕಿಕೊಂಡು ಯಾವುದೇ ಅಕ್ಷೇಪ ವ್ಯಕ್ತಪಡಿಸದಿರುವುದರಿಂದ ಶೇ 1.1 ರಷ್ಟು ತೆರಿಗೆ ಪಾಲು ಕಡಿ ಮಾಡಿ ಹಣಕಾಸು ಆಯೋಗ ಶಿಪಾರಸ್ಸು ಮಾಡಿದೆ. ಹಣಕಾಸು ಆಯೊಗ ಸಂವಿಧಾನ ಬದ್ದ ಸಂಸ್ಥೆಯಾಗಿದ್ದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೊಂದು ಸುಳ್ಳು ಮುಖ್ಯಮಂತ್ರಿ ಗಳು ಪದೇ ಪದೇ ಹೇಳುತ್ತಿದ್ದು, ಕೇಂದ್ರದ ತೆರಿಗೆಗಳು ಸರ್ ಚಾರ್ಜ್ ಸಮೇತವಾಗಿ 4 ಲಕ್ಷ ಕೋಟಿಗಿಂತಲೂ ಹೆಚ್ಚು ಎಂದು ಹೇಳುವಂಥದ್ದು ಯಾರು ಒಪ್ಪಲು ಸಾಧ್ಯ ? ರಾಜ್ಯಕ್ಕೆ ತೆರಿಗೆ ಹಂಚಿಕೆ ಮೂಲಕ ಬರುವುದು ಜಿಎಸ್ ಟಿ ಮಾತ್ರ ಈ ಲೆಕ್ಕವನ್ನು ಸಿಎಂ ಮರೆಮಾಚುತ್ತಿದ್ದಾರೆ. ಸರ್ ಚಾರ್ಜ್ ಗಳು ಹೆಚ್ಚಳವಾಗಿರುವುದು ಅದನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳದೆ ನೇರವಾಗಿ ಜಿಎಸ್ ಟಿ ತೆರಿಗೆ ಪರಿಹಾರಕ್ಕೆ ರಾಜ್ಯಗಳಿಗೆ ಕೊಡುತ್ತಿದ್ದು, ರಾಜ್ಯಕ್ಕೆ ಜಿಎಸ್ ಟಿ ಪಾಲಿನ ಜೊತೆಗೆ 5 ವರ್ಷದಲ್ಲಿ 1,06,358 ರೂ ತೆರಿಗೆ ಪರಿಹಾರ ರೂಪದಲ್ಲಿ ಬಂದಿದೆ ಇದನ್ನು ಮುಖ್ಯಮಂತ್ರಿಗಳು ಹೇಳಲು ಯಾಕೆ ಹಿಂಜರಿಯುತ್ತಿದ್ದಾರೆ. ಹಾಗೂ ಕೇಂದ್ರದ ಬಜೆಟ್ ಗಾತ್ರಕ್ಕೂ ರಾಜ್ಯಗಳ ತೆರಿಗೆ ಪಾಲಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ರಾಜಕೀಯ ಕಾರಣಕ್ಕೆ ಸಂಬಂಧ ಕಲ್ಪಿಸುವ ಸಾಹಸ ಮುಖ್ಯಮಂತ್ರಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಅವರೇ ಬಜೆಟ್‌ನಲ್ಲಿ ಹೇಳಿರುವಂತೆ 1,75,675 ರಾಜಸ್ವವನ್ನು ಸಂಗ್ರಹ ಮಾಡುವ ಗುರಿಯಲ್ಲಿ ಕೇವಲ 1,61,494 ಕೋಟಿ ಸಂಗ್ರಹ ಮಾತ್ರ ಮಾಡಿದ್ದಾರೆ ಸುಮಾರು 14 ಸಾವಿರ ಕೊಟಿ ಸಂಗ್ರಹಿಸಲು ಸಿದ್ದರಾಮಯ್ಯ ಅವರ ಹಣಕಾಸು ಇಲಾಖೆ ವಿಫಲವಾಗಿದೆ. ನನ್ನ ಫೆಬ್ರವರಿ ಬಜೆಟ್ ನಲ್ಲಿ 1,64,650 ಕೋಟಿ ಗುರಿಯನ್ನೂ ಕೂಡ ಮುಟ್ಡದೇ ಇರುವುದು ರಾಜ್ಯ ಸರ್ಕಾರದ ವೈಫಲ್ಯ. ತೆರಿಗೆ ಸಂಗ್ರಹ ಮಾಡದೇ ಬಜೆಟ್ ಗಾತ್ರ ಹೆಚ್ಚಿಸಿರುವುದು ಹಣಕಾಸು ನಿರ್ವಹಣೆಯ ದಡ್ಡತನ ಹಾಗೂ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಬಜೆಟ್ ನಲ್ಲಿ 37,252 ಕೋಟಿ ಕೆಂದ್ರದ ತೆರಿಗೆ ಪಾಲು ಬಜೆಟ್ ನಲ್ಲಿ ಅಂದಾಜಿಸಿದ್ದು 40,280 ಕೋಟಿ ಬರುತ್ತಿದ್ದು ಸುಮಾರು 3000 ಕೋಟಿ ಹೆಚ್ಚಿನ ತೆರಿಗೆ ಪಾಲು ಕೇಂದ್ರ ಕೊಟ್ಟಿದೆ. ಅಲ್ಲದೇ ಅಬಕಾರಿ, ವಾಹನ ತೆರಿಗೆ, ಮುದ್ರಾಂಕ ತೆರಿಗೆ ಹೆಚ್ಚಳ ಮಾಡಿ ಸುಮಾರು 13500 ಕೋಟಿ ಹೊಸ ತೆರಿಗೆ ಭಾರ ಹಾಕಿ ಮತ್ತು 8000 ಕೋಟಿ ನನ್ನ ಬಜೆಟ್ ಗಿಂತ ಹೆಚ್ಚು ಸಾಲ ಪಡೆದು ಕೊರತೆಯ ಬಜೆಟ್ ಸತತ ಎರಡು ವರ್ಷ ಮಾಡಿದ್ದು ರಾಜ್ಯದ ಹಣಕಾಸು ನಿರ್ವಹಣೆ ವಿಫಲವಾಗಿದ್ದು, ಹಳಿ ತಪ್ಪಿ ರಾಜ್ಯ ದಿವಾಳಿಯತ್ತ ಸಾಗುತ್ತಿರುವುದೇ ಸಾಕ್ಷಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಶಿಕ್ಷಣ, ಆರೋಗ್ಯ ಮೂಲಭೂತ ಸೌಕರ್ಯ, ನೀರಾವರಿ ವಿದ್ಯುತ್, ಕೃಷಿ, ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದ ಹಣಕಾಸನ್ನು ಒದಗಿಸದೇ ಹಾಗೂ ಖರ್ಚು ಮಾಡದೇ ಈ ಎಲ್ಲ ವಲಯಗಳಲ್ಲಿ ರಾಜ್ಯದ ಅಭಿವೃದ್ಧಿ ಹತ್ತು ವರ್ಷ ಹಿನ್ನಡೆಯಾಗಿದೆ. ಒಂದು ಕಡೆ ಅಭಿವೃದ್ಧಿಗೆ ಹಣ ಕೊಡದೇ ಇನ್ನೊಂದು ಕಡೆ ಬರಗಾಲದಲ್ಲಿ ಕುಡಿಯುವ ನೀರಿನ ಹಾಹಾಕಾರ ಇದ್ದರೂ ಕೂಡ ಹಣ ಬಿಡುಗಡೆ ಮಾಡದೇ ಮತ್ತು ರೈತರಿಗೆ ಪರಿಹಾರ ಕೊಡದೇ ರಾಜ್ಯದ ಎಲ್ಲ ವರ್ಗಗಳ ಎಲ್ಲ ವಲಯದಲ್ಲಿ ಜನರನ್ನು ಸಂಕಷ್ಟಕ್ಕೆ ನೂಕಿದೆ. ಕೇಂದ್ರದ ಎನ್ ಡಿಎ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಶಿಕ್ಷಣ, ಆರೊಗ್ಯ, ಕೃಷಿ ಯೋಜನೆಗಳನ್ನು ನಿಲ್ಲಿಸಿದೆ. ಎಸ್ಸಿ ಎಸ್ಟಿ ಸುಮಾರು 11,300 ಕೋಟಿ ರೂ ಹಣವನ್ನು ಗ್ಯಾರೆಂಟಿಗೆ ಕೊಟ್ಟು ದಲಿತರಿಗೆ ವಂಚಿಸಿದೆ ಎಂದು ದೂರಿದ್ದಾರೆ.
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಇಳಿಮುಖವಾಗಿದೆ ವಿದೇಶಿ ಬಂವಾಳ ಹೂಡಿಕೆ ಶೇ 40% ರಷ್ಟು ಇಳಿದಿದೆ. ಈ ಮಧ್ಯೆ ಮುಖ್ಯಮಂತ್ರಿಗಳು ರಾಜ್ಯದ ಶೂನ್ಯ ಪ್ರಗತಿಯನ್ನೇ ತಮ್ಮ ಸಾಧನೆ ಎಂದು ಬಿಂಬಿಸುತ್ತಿರುವುದು ವಿಪರ್ಯಾಸ ಒಂದು ರೀತಿಯಲ್ಲಿ ರಾಜ್ಯವನ್ನು ಹಿಂದಕ್ಕೆ ತಳ್ಳುತ್ತಿರುವ ರೀವರ್ಸ್ ಗೇರ್ ಸರ್ಕಾರ ಇದಾಗಿದೆ ಎಂದು ಆರೋಪಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.