ಬೆಳಗಾವಿ: ಬೇರೆ ದೇಶಗಳಲ್ಲಿ ಕೋವಿಡ್‌ ಪ್ರಕರಣ ಹೆಚ್ಚಳ ಹಾಗೂ ಹೊಸ ರೂಪಾಂತರಿ ವೈರಾಣು ಕಂಡುಬಂದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಐಎಲ್‌ಐ ಮತ್ತು ಸಾರಿ ಸಮಸ್ಯೆ ಇರುವವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ, ಕೋವಿಡ್‌ ನಿರ್ವಹಣೆ ಕುರಿತು ಸಭೆ ನಡೆದ ಬಳಿಕ ಸಚಿವರು ಮಾಹಿತಿ ನೀಡಿದರು.


ಚೀನಾ ಸೇರಿದಂತೆ ಬೇರೆ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ. ಈಗಾಗಲೇ 2-3 ಸಾವಿರ ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಇದರ ಜೊತೆಗೆ, ರಾಜ್ಯದಲ್ಲಿ ಐಎಲ್‌ಐ ಮತ್ತು ಸಾರಿ ಸಮಸ್ಯೆ ಇರುವವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಒಳಾಂಗಣ ಸ್ಥಳ, ಎಸಿ ಇರುವ ಕಡೆಗಳಲ್ಲಿ ಮಾಸ್ಕ್‌ ಧರಿಸಬೇಕು ಎಂದು ಸೂಚನೆ ನೀಡಲಾಗುವುದು. ವಿದೇಶದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬರುವ ಪ್ರಯಾಣಿಕರಿಗೆ ಪರೀಕ್ಷೆ ಮಾಡಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. ಈಗಾಗಲೇ ವಿಮಾನ ನಿಲ್ದಾಣದಲ್ಲಿ ಕೆಲವರಿಗೆ ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.


ಇದನ್ನೂ ಓದಿ : ಕಿರಿಮಗನ ಲವ್ ಸ್ಟೋರಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ..!


ಅನೇಕ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಘಟಕಗಳನ್ನು ಅಳವಡಿಸಲಾಗಿದೆ. ಇವುಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಸಿದ್ಧತೆ ಕೈಗೊಳ್ಳಲು ಸೂಚಿಸಲಾಗುವುದು. ಜಿಲ್ಲಾಸ್ಪತ್ರೆಗಳಲ್ಲಿ ಕೆಲ ಹಾಸಿಗೆಗಳನ್ನು ಕೋವಿಡ್‌ಗೆ ಮೀಸಲಿಡಲು ತೀರ್ಮಾನವಾಗಿದೆ. ಖಾಸಗಿ ಆಸ್ಪತ್ರೆಯಲ್ಲೂ ಹಾಸಿಗೆ ಮೀಸಲಿಡಲು ಸೂಚಿಸಲಾಗುವುದು ಎಂದು ತಿಳಿಸಿದರು.


ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಭೆ ನಡೆಯುತ್ತಿದ್ದು, ಅಲ್ಲಿಂದ ನೀಡುವ ಮಾರ್ಗಸೂಚಿಯನ್ನು ನೋಡಿಕೊಂಡು ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದರು.


3 ನೇ ಡೋಸ್‌


ಕೋವಿಡ್‌ ಪ್ರಕರಣ ಕಡಿಮೆಯಾದ ಹಿನ್ನೆಲೆಯಲ್ಲಿ, ಜನರು ಮೂರನೇ ಡೋಸ್‌ನ ಲಸಿಕೆ ಪಡೆಯಲು ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ 3 ನೇ ಡೋಸ್‌ ಲಸಿಕಾಕರಣದಲ್ಲಿ ಶೇ.20 ರಷ್ಟು ಮಾತ್ರ ಪ್ರಗತಿಯಾಗಿದೆ. ಇದಕ್ಕಾಗಿ ಎಲ್ಲಾ ತಾಲೂಕುಗಳಲ್ಲಿ ವಿಶೇಷ ಲಸಿಕಾ ಶಿಬಿರ ಏರ್ಪಡಿಸಿ, 3 ನೇ ಡೋಸ್‌ನಲ್ಲೂ ಶೇ.100 ರಷ್ಟು ಗುರಿ ತಲುಪಲು ಸೂಚಿಸಲಾಗಿದೆ. ಇದಕ್ಕೆ ಪೂರಕವಾಗಿ ಲಸಿಕೆಯನ್ನು ಸಂಗ್ರಹಿಸಿಡಲು ಸೂಚಿಸಲಾಗುವುದು ಎಂದು ವಿವರಿಸಿದರು.


ಅಂತೆಕಂತೆ ಕೇಳಬೇಡಿ


ಜನರು ಆದಷ್ಟು ಬೇಗ ಮೂರನೇ ಡೋಸ್‌ ಪಡೆಯಬೇಕು. ಪರವಾಗಿಲ್ಲ ಎಂಬ ಉದಾಸೀನತೆ ಬಿಡಬೇಕು. ಮೂರನೇ ಡೋಸ್‌ ಪಡೆದರೆ ಅಡ್ಡ ಪರಿಣಾಮ ಇದೆಯೇ ಎಂಬುದು ಸದನದಲ್ಲೂ ಕೇಳಿಬಂತು. ಇಂತಹ ಅಂತೆಕಂತೆ ಮಾತುಗಳನ್ನು ಯಾರೂ ಕೇಳಬಾರದು. ಲಸಿಕೆಯಿಂದ ಅಪಾಯವಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ದಾಖಲೆ ಇಲ್ಲ. ಲಸಿಕೆ ಪಡೆದು ನಮ್ಮನ್ನು ನಾವು ಕೋವಿಡ್‌ನಿಂದ ರಕ್ಷಿಸಿಕೊಳ್ಳಬಹುದು. ಹಾಗೆಯೇ ಮಾಸ್ಕ್‌ ಕೂಡ ಧರಿಸಬೇಕು.ರೂಪಾಂತರಿ ವೈರಾಣು ಯಾವುದೇ ಪರಿಣಾಮ ಬೀರದಂತೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಸಚಿವರು ಕೋರಿದರು.


ಇದನ್ನೂ ಓದಿ : Shocking: ಮುಗ್ಧ ಬಾಲಕಿಯ ಪ್ರಾಣ ಬಲಿ ಪಡೆದ ಪೆನ್ಸಿಲ್ ಸಿಪ್ಪೆ


ಸಾಮಾನ್ಯ ತಿಳಿವಳಿಕೆ ಇರಲಿ


ಕಾಂಗ್ರೆಸ್‌ನ ಪಾದಯಾತ್ರೆ ಆರಂಭವಾಗಿ 100 ದಿನ ಕಳೆದಿದೆ. ಈ ಮೂರು ತಿಂಗಳಲ್ಲಿ ಕೋವಿಡ್‌ ಬಗ್ಗೆ ಯಾರೂ ಮಾತಾಡಲಿಲ್ಲ. ಹಾಗಾದರೆ ಚೀನಾ, ಅಮೆರಿಕದಲ್ಲಿ ಕೋವಿಡ್‌ ಹೆಚ್ಚು ಮಾಡಿದ್ದು ನಾವೇ? ಕಾಂಗ್ರೆಸ್‌ ನಾಯಕರಿಗೆ ಸಾಮಾನ್ಯ ತಿಳಿವಳಿಕೆಯಾದರೂ ಇರಬೇಕು ಎಂದು ಸಚಿವರು ಟೀಕಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.