ಅಪಾರ್ಟ್ಮೆಂಟ್ನಲ್ಲಿ ಎಸ್‌ಟಿಪಿ ಅಳವಡಿಕೆಗೆ ಕಾನೂನು ತರಲು ರಾಜ್ಯ ಸರ್ಕಾರದ ಚಿಂತನೆ!
ನಗರದಲ್ಲಿರುವ 1.3 ಕೋಟಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ಕಾವೇರಿ ಬಿಟ್ಟರೆ ಬೇರೆ ಯಾವ ಮೂಲವು ಇಲ್ಲ. ಪ್ರಸ್ತುತ 5,500 ಕೋಟಿ ವೆಚ್ಚದಲ್ಲಿ 5ನೇಹಂತದ ಕಾವೇರಿ ನೀರು ತರಲಾಗುತ್ತಿದೆ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ
ಬೆಂಗಳೂರು: ಹೊಸದಾಗಿ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಎಸ್‌ಟಿಪಿ ಅಳವಡಿಸಿಕೊಳ್ಳುವ ಸಂಬಂಧ ನೂತನ ಕಾನೂನು ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸುವರ್ಣ ಭವನದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಬಳಿಕ ಮಾತನಾಡಿದ ಅವರು, ಬೆಂಗಳೂರಿಗೆ ನೀರಿನ ಬವಣೆ ನೀಗಿಸಲು ಆಯಾ ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ನಿರ್ಮಾಣ ಮಾಡಿಕೊಳ್ಳುವುದರಿಂದ ನೀರಿನ ಸಮಸ್ಯೆ ತಲೆದೂರುವುದಿಲ್ಲ. ಹೀಗಾಗಿ ಈ ಸಂಬಂಧ ಕಾನೂನು ತರುವುದು ಎಂದರು.
ನಗರದಲ್ಲಿರುವ 1.3 ಕೋಟಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ಕಾವೇರಿ ಬಿಟ್ಟರೆ ಬೇರೆ ಯಾವ ಮೂಲವು ಇಲ್ಲ. ಪ್ರಸ್ತುತ 5,500 ಕೋಟಿ ವೆಚ್ಚದಲ್ಲಿ 5ನೇಹಂತದ ಕಾವೇರಿ ನೀರು ತರಲಾಗುತ್ತಿದೆ.
340 ಕೋಟಿ ರೂ.ವೆಚ್ಚದಲ್ಲಿ ತಿಪ್ಪಗೊಂಡನಹಳ್ಳಿ ಡ್ಯಾಂ ಅನ್ನು ಪುನಶ್ಚೇತನ ಮಾಡಲಾಗುತ್ತಿದೆ. ಜೊತೆಗೆ 1300 ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆ ಮೂಲಕ 2.5 ಟಿಎಂಸಿ ನೀರು ತರಲಾಗುತ್ತದೆ. ಈ ಮೂಲವೂ ಕೂಡ ಬೆಂಗಳೂರಿನ ಕುಡಿಯುವ ನೀರಿನ ಬವಣೆ ನೀಗಿಸಲು ಸಾಲದು ಎಂದು ತಿಳಿಸಿದರು.
ಲಿಂಗನಮಕ್ಕಿಯಿಂದ ನೀರು ತರಲು ಡಿಪಿಆರ್ ಮಾಡಲು ಸೂಚಿಸಿದ್ದೇನೆ. ವಿದ್ಯುತ್ ಉತ್ಪಾದನೆಯಾದ ನೀರು ಸಮುದ್ರಕ್ಕೆ ಹೋಗಲಿದೆ. ಈ ನೀರನ್ನು ಬೆಂಗಳೂರಿಗೆ ತರಲು ಯೋಜಿಸಿದ್ದೇವೆ. ಮುಂದಿನ ದಿನದಲ್ಲಿ ಕನಿಷ್ಠ 10ಟಿಎಂಸಿ ನೀರನ್ನು ತರಲಾಗುತ್ತೆ. ಆದರೆ ಇದಕ್ಕೂ ವಿರೋಧ ವ್ಯಕ್ತವಾಗಿದೆ. ಅವರ ಮನವೊಲಿಸಿಯೇ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಬೆಂಗಳೂರಿಗೆ ನೀರು ತರಲು ಎಲ್ಲಾ ಮೂಲಗಳಿಂದಲೂ ಪ್ರಯತ್ನ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.
ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಐದು ವರ್ಷದಲ್ಲಿ 50 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. 2050 ರೊಳಗೆ 3.5 ಕೋಟಿ ಜನಸಂಖ್ಯೆ ಆಗಲಿದೆ. ಈ ಎಲ್ಲರಿಗೂ ನೀರು ಪೂರೈಕೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಶಾಸಕ ಡಾ.ಸಿ. ಅಶ್ವತ್ಥ ನಾರಾಯಾಣ ಅವರ ಬೇಡಿಕೆಯಂತೆ ಸುವರ್ಣ ಭವನದಲ್ಲಿ ಚೌಡಯ್ಯ ಭವನದ ಮಾದರಿಯಲ್ಲಿ ನಿರ್ಮಾಣ ಮಾಡಲು 10 ಕೋಟಿ ರೂ. ಮೊತ್ತ ನೀಡುವ ಭರವಸೆಯನ್ನೂ ನೀಡಿದರು.