ನವ ಕನಾ೯ಟಕದತ್ತ ರಾಜ್ಯ ದಾಪುಗಾಲು: ಮುಖ್ಯಮಂತ್ರಿ ಸಿದ್ಧರಾಮಯ್ಯ
ಬೆಂಗಳೂರು: ನವ ಕನಾ೯ಟಕ ನಿಮಿ೯ಸುವತ್ತ ರಾಜ್ಯ ಸರಕಾರ ದಾಪುಗಾಲು ಹಾಕಿದ್ದು, ಮುಂದಿನ ದಿನಗಳಲ್ಲಿ ಕನಾ೯ಟಕ ದೇಶದಲ್ಲಿಯೇ ಅತಿ ಪ್ರಗತಿ ಹೊಂದಿದ ರಾಜ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ, ಇಡೀ ರಾಜ್ಯದ 224 ಕ್ಷೇತ್ರಗಳಲ್ಲೂ ಸಮಗ್ರ ಅಭಿವೃದ್ಧಿ ಪಡಿಸಲಾಗಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಸೇರಿದಂತೆ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ. ರಾಜ್ಯ ಸಚಿವ ಸಂಪುಟದ ಯಾವ ಸದಸ್ಯರ ಮೇಲೂ ಪ್ರಕರಣ ದಾಖಲಾಗಿಲ್ಲ. ನಮ್ಮದು ಹಗರಣ ರಹಿತ ಸರಕಾರ ವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸಾಲ ಮನ್ನಾ ಮಾಡುವ ಮೂಲಕ ರಾಜ್ಯ ಸರಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿದೆ. ಕೇಂದ್ರ ಸರಕಾರವು ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಪಡೆದಿರುವ ಸಾಲ ಮನ್ನಾ ಮಾಡಬೇಕು. ಎಸ್ ಸಿಪಿ ಮತ್ತು ಟಿಎಸ್ ಪಿ ಕ್ರಿಯಾಯೋಜನೆಯಲ್ಲಿ ಕಳೆದ 4 ವಷ೯ಗಳಲ್ಲಿ ರೂ. 86000 ಕೋಟಿ ಅನುದಾನ ವೆಚ್ಚ ಮಾಡಲಾಗಿದೆ. ಕಾಮಗಾರಿ ಗುತ್ತಿಗೆಯಲ್ಲಿ ದಲಿತರಿಗೆ ಶೇಕಡಾ 24.1 ಮೀಸಲಾಗಿಡಲಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ 10 ಪಟ್ಟು ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.
ರಾಜ್ಯದಲ್ಲಿ ಇನ್ನೂ 300 ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗುತ್ತಿದ್ದು, ಮಂಗಳೂರು ನಗರದಲ್ಲಿ 6 ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು. ಪದವಿ ತರಗತಿಯಲ್ಲಿ ಕಲಿಯುತ್ತಿರುವ ರಾಜ್ಯದ 1.86 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗುತ್ತಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡದೆ ಎಲ್ಲಾ ಜಾತಿಯ ವಿದ್ಯಾಥಿ೯ಗಳಿಗೂ ಲ್ಯಾಪ್ ಟಾಪ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ದೇಶದ ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿಸಿದವರು ಟಿಪ್ಪು. ಭಾರತದ ಇತಿಹಾಸದಲ್ಲಿ ಬ್ರಿಟೀಷರ ವಿರುದ್ಧ 4 ಯುದ್ಧಗಳನ್ನು ಮಾಡಿದ ಟಿಪ್ಪು ಸುಲ್ತಾನರ ಜಯಂತಿ ಆಚರಿಸಲು ನಮ್ಮ ಸರಕಾರಕ್ಕೆ ಹೆಮ್ಮೆ ಇದೆ. ಇದೇ ರೀತಿ ಬಸವಣ್ಣ, ಕೆಂಪೇಗೌಡ, ಕನಕ, ನಾರಾಯಣ ಗುರು, ಶ್ರೀಕೃಷ್ಣ ಸೇರಿದಂತೆ ಹಲವು ಮಹಾತ್ಮರ ಜಯಂತಿಯನ್ನು ನಮ್ಮ ಸರಕಾರ ಆಚರಿಸುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಧಮ೯ ಜಾತಿಗಳ ನಡುವೆ ಸಂಘಷ೯ ತರುವುದು ಸಂವಿಧಾನಕ್ಕೆ ಎಸಗುವ ಅಪಚಾರವಾಗಿದೆ. ಕೋಮುವಾದಿಗಳನ್ನು ಯಾವತ್ತೂ ಬೆಂಬಲಿಸಬಾರದು. ಇದು ಪ್ರಗತಿಗೆ ಮಾರಕವಾಗಿದೆ ಎಂದು ಸಿಎಂ ನುಡಿದರು.
ರೂ. 252 ಕೋಟಿ ಯೋಜನೆಗಳಿಗೆ ಚಾಲನೆ:
ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾನುವಾರ ಬಂಟ್ವಾಳ ತಾಲೂಕಿನ ನೂತನ ಮಿನಿವಿಧಾನಸೌಧ, ಮೆಸ್ಕಾಂ ಕಚೇರಿ, ಪ್ರವಾಸಿ ಮಂದಿರ ಕಟ್ಟಡ, ಅರಣ್ಯ ಇಲಾಖೆ ಟ್ರೀ ಪಾಕ್೯, ಮೇಲ್ದರ್ಜೆಗೆ ಏರಿಸಲಾದ 100 ಹಾಸಿಗೆಗಳ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆ, ಬಂಟ್ವಾಳ ನಗರ ಕುಡಿಯುವ ನೀರಿನ ಯೋಜನೆ, ಬಿ.ಸಿ.ರೋಡ್ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಕರೋಪಾಡಿ ಹಾಗೂ ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಉದ್ಘಾಟಿಸಿದರು.
ಅಲ್ಲದೆ, ಬಂಟ್ವಾಳದಲ್ಲಿ ಪಂಜೆ ಮಂಗೇಶರಾಯರು ಸ್ಮಾರಕ ಭವನ, ಮೂಲರಪಟ್ಣ ಕಿಂಡಿ ಅಣೆಕಟ್ಟು, ನರಿಕೊಂಬು, ಸರಪಾಡಿ, ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು, ನೇತ್ರಾವತಿ ನದಿಗೆ ಸೇತುವೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು. ಒಟ್ಟು ರೂ. 252 ಕೋಟಿ ಯೋಜನೆಗಳಿಗೆ ಮುಖ್ಯಮಂತ್ರಿಗಳು ಭಾನುವಾರ ಚಾಲನೆ ನೀಡಿದರು.