ನವದೆಹಲಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ‌. ಸದಾನಂದಗೌಡ ಬುಧವಾರ ತಮ್ಮ ದೆಹಲಿಯ ನಿವಾಸದಲ್ಲಿ ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸಂಸದರಿಗೆ ಔತಣಕೂಟ ಮತ್ತು ಅಭಿವೃದ್ಧಿ ಯೋಜನೆಗಳ ಮೇಲೆ ನಡೆಸುವ ಸಭೆ ಆಯೋಜಿಸಿದ್ದರು.


COMMERCIAL BREAK
SCROLL TO CONTINUE READING

ರಾಜ್ಯದ ಸರ್ವ ಪಕ್ಷದ ಸಂಸದರ ಸಭೆಯಲ್ಲಿ ರಾಜ್ಯದಿಂದ ಕೇಂದ್ರದಲ್ಲಿ ಮಂತ್ರಿ ಆಗಿರುವ ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಮತ್ತು ಬಿಜೆಪಿಯ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ಭಾಗವಹಿಸಿದ್ದರು.



ಕೇಂದ್ರದ ಯೋಜನೆಗಳನ್ನು ರಾಜ್ಯದ ಜನರಿಗೆ ತಲುಪಿಸುವ ಬಗ್ಗೆ ಚರ್ಚೆಯಾಯಿತು. ಪ್ರತಿ 15 ದಿನಕ್ಕೊಮ್ಮೆ ಸಚಿವರು ಸಭೆ ಸೇರಿ ರಾಜ್ಯಕ್ಕೆ ಹೆಚ್ಚೆಚ್ಚು ಅನುದಾನ ಮತ್ತು ಯೋಜನೆ ತೆಗೆದುಕೊಂಡು ಹೋಗಬೇಕೆಂದು ನಿಶ್ಚಯಿಸಲಾಯಿತು.



ಸಭೆಯ ಬಳಿಕ ಮಾತನಾಡಿದ ಕೇಂದ್ರ ಸಚಿವ ಸದಾನಂದಗೌಡ,  ಎನ್‌ಡಿಎ ಸರ್ಕಾರ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಮುಖೇನ ಕಳೆದ 5 ವರ್ಷಗಳಲ್ಲಿ ಹಲವಾರು ಜನಪರ ಯೋಜನೆಗಳನ್ನು ಈ ದೇಶದ ಜನತೆಗೆ ಸಮರ್ಪಿಸಿರುವ ಕುರಿತು ಮತ್ತು ಈ ಇಲಾಖೆಯ ಯೋಜನೆಗಳು ಮುಖೇನ ಯಾವೆಲ್ಲಾ ಸೌಲಭ್ಯಗಳನ್ನು ಜನತೆಗೆ ಅದರಲ್ಲೂ ರೈತಾಪಿ ವರ್ಗದವರಿಗೆ ಸಂಸದರುಗಳು ಅವರವರ ಲೋಕಸಭಾ ಕ್ಷೇತ್ರದಲ್ಲಿ ತಲುಪಿಸಬಹುದು ಎಂಬ ಮಾಹಿತಿಯನ್ನು ನೀಡುವ ಬಗ್ಗೆ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ  ವಿವರವಾಗಿ ಚರ್ಚಿಸಲಾಯಿತು.


ಪಕ್ಷಬೇಧ ಮರೆತು ರಾಜ್ಯದ ಅಭಿವೃದ್ಧಿಗೆ ಚರ್ಚಿಸಬೇಕಿದೆ. ಅದಕ್ಕಾಗಿ ಇವತ್ತು ರಾಜ್ಯದ ಎಲ್ಲಾ ಪಕ್ಷದ ಸಂಸದರು ಸೇರಿದ್ದೆವು. ಇನ್ನು ಮುಂದೆ ಸಚಿವರು ಪ್ರತಿ 15 ದಿನಕ್ಕೊಮ್ಮೆ ಸೇರಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.