ಬೆಂಗಳೂರು: 'ತಾವು ರಾಜಕೀಯ ಪ್ರವೇಶಿಸಿದರೆ ಮಂಡ್ಯದಿಂದಲೇ ಕಣಕ್ಕಿಳಿಯುವೆ. ಮಂಡ್ಯದ ಅಭಿಮಾನಿಗಳ ಪ್ರೀತಿ ಕಳೆದುಕೊಳ್ಳಲು ನಾನು ಮತ್ತು ನನ್ನ ಮಗ ಇಬ್ಬರೂ ಇಷ್ಟ ಪಡುವುದಿಲ್ಲ' ಎಂದು ನಟಿ ಸುಮಲತಾ ಅಂಬರೀಶ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮಂಡ್ಯದಿಂದ ಆಗಮಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಸುಮಲತಾ ಅಂಬರೀಶ್‌ ಅವರನ್ನು ಶುಕ್ರವಾರ ಬೆಂಗಳೂರಿನ ಅವರ ಜಯನಗರದ ನಿವಾಸದಲ್ಲಿ ಭೇಟಿ ಮಾಡಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಮನವಿ ಮಾಡಿದರು. ಇನ್ನು ಇದೇ ವೇಳೆ ಸುಮಲತಾ ಅವರನ್ನು ತಾವು ಮಂಡ್ಯದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಬೇಕು. ಪಕ್ಷೇತ ರರಾಗಿ ಸ್ಪರ್ಧಿಸಿದರೂ ನಾವು ಬೆಂಬಲ ನೀಡುತ್ತೇವೆ. ದೇವೇಗೌಡರು ಅಂಬರೀಶ್‌ ಅವರನ್ನು ತಮ್ಮ ಮಗ ಎಂದು ಹೇಳಿದ್ದರು. ನೀವು ಸ್ಪರ್ಧೆ ಮಾಡಿದರೆ ಎಲ್ಲರೂ ಬೆಂಬಲಿಸುತ್ತಾರೆ ಎಂದು ಆಗ್ರಹಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ಸುಮಲತಾ, 'ನನಗೆ ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ. ಅಕಸ್ಮಾತ್‌ ರಾಜಕೀಯಕ್ಕೆ ಬಂದರೆ ಮಂಡ್ಯದಿಂದ ಮಾತ್ರ. ಮಂಡ್ಯದ ಜನರೊಂದಿಗೆ ಅಂಬರೀಶ್‌ಗೆ ಇದ್ದ ಸಂಬಂಧವನ್ನು ಕಡಿದುಕೊಳ್ಳಲು ಸಾಧ್ಯವಿಲ್ಲ. ಅಭಿಮಾನಿಗಳೇ ನನ್ನ ಶಕ್ತಿ. ನನಗೆ ಯಾವುದೇ ಪದವಿ ಅಥವಾ ರಾಜಕೀಯದ ಆಸೆ ಇಲ್ಲ. ಯಾವುದೇ ದುಡುಕಿನ ತೀರ್ಮಾನ ತೆಗೆದುಕೊಳ್ಳುವುದಿಲ್ಲ' ಎಂದರು.


ಕಾಂಗ್ರೆಸ್‌ ಕಾರ್ಯಕರ್ತರು ಬಂದು ಚುನಾವಣೆಗೆ ನಿಲ್ಲುವಂತೆ ಕೇಳಿದ್ದಾರೆ. ಅಭಿಮಾನಿಗಳ ಆಸೆ ನಮ್ಮ ಅವರ ಸಂಬಂಧ ಮುಂದುವರಿಯಬೇಕು ಎನ್ನುತ್ತಿದ್ದಾರೆ. ಈ ಜನರು ಅಂಬರೀಷ್ ಸಂಪಾದಿಸಿದ ಆಸ್ತಿ. ಇದನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ರಾಜಕೀಯದಲ್ಲಿ ಚುನಾವಣೆ ಎದುರಿಸುವುದು ಅಷ್ಟು ಸುಲಭವಲ್ಲ. ನಾನು ಯೋಚನೆ ಮಾಡಬೇಕು. ಎಲ್ಲವನ್ನೂ ಚರ್ಚೆ ಮಾಡಿ, ಎಲ್ಲರ ಸಲಹೆಗಳನ್ನು ಪಡೆದು ತೀರ್ಮಾನ ತೆಗೆದುಕೊಳ್ಳುತ್ತೇನೆ' ಎಂದು ಅವರು ತಿಳಿಸಿದರು.


ಅಂಬರೀಶ್‌ ಕಾಂಗ್ರೆಸ್‌ ಪಕ್ಷದಿಂದಲೇ ಗುರುತಿಸಿಕೊಂಡಿದ್ದರು. ನಮಗೂ ಕೂಡ ಕಾಂಗ್ರೆಸ್‌ ಪಕ್ಷ ಪರಿಚಯ. ಆದರೆ, ನಾನು ಯಾವುದೇ ಕಾಂಗ್ರೆಸ್‌ ನಾಯಕರ ಜೊತೆ ಮಾತನಾಡಿಲ್ಲ. ಕಾಂಗ್ರೆಸ್‌ ನಾಯಕರ ಜೊತೆ ಮಾತನಾಡಬೇಕು. ಅಭಿಮಾನಿಗಳ ಪ್ರೀತಿಗೆ ಖಂಡಿತ ಬೆಲೆ ಕೊಡುತ್ತೇವೆ. ಅವರ ಪ್ರೀತಿ ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ. ನಾನು ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿ ವಿವಾದ ಮಾಡಿಕೊಳ್ಳಲು ಇಷ್ಟ ಪಡುವುದಿಲ್ಲ ಎಂದು ಸುಮಲತಾ ಸ್ಪಷ್ಟಪಡಿಸಿದರು.