ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಮರನಾಥ್ ಹೆಸರಿನಲ್ಲಿ ಸುಮಲತಾ ಅಂಬರೀಶ್ ಬುಧವಾರ ನಾಮಪತ್ರ ಸಲ್ಲಿಸಿದರು.


COMMERCIAL BREAK
SCROLL TO CONTINUE READING


ನಾಮಪತ್ರ ಸಲ್ಲಿಕೆಗೂ ಮೊದಲು ಮೈಸೂರಿಗೆ ತೆರಳಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಸುಮಲತಾ ಅಂಬರೀಶ್, ಅಲ್ಲಿಂದ ನೇರವಾಗಿ ಮಂಡ್ಯ ತಾಲೂಕಿನ ಇಂಡುವಾಳಿಗೆ ತೆರಳಿ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ನಿವಾಸಕ್ಕೆ ಭೇಟಿ ನೀಡಿದರು. ಅಲ್ಲಿಂದ ತಮ್ಮ ಪುತ್ರ ಅಂಬರೀಶ್, ಮನೆ ಮಗ ಯಶ್, ನಟ ದೊಡ್ಡಣ್ಣ, ರಾಕಲೈನ್ ವೆಂಕಟೇಶ್, ಅಂಬರೀಶ್ ಸಹೋದರನ ಪುತ್ರ ಮಧುಸೂದನ್ ಸೇರಿದಂತೆ ಸಾವಿರಾರು ಅಭಿಮಾನಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸುಮಲತಾ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.


ನಾಮಪತ್ರ ಸಲ್ಲಿಕೆ ವೇಳೆ ಸುಮಲತಾ ಸಲ್ಲಿಸಿರುವ ಆಫಿಡೆವಿಟ್ ನಲ್ಲಿ ಅವರ ಆಸ್ತಿ ವಿವರ ಹಂಚಿಕೊಂಡಿದ್ದು, ಅವರ ಬಳಿ ಐದೂವರೆ ಕೆಜಿ ಚಿನ್ನ, 31 ಕೆಜಿ ಬೆಳ್ಳಿ ಹಾಗೂ 5 ಕೋಟಿ ರೂ. ಚರಾಸ್ತಿ, 17 ಕೋಟಿ ಸ್ಥಿರಾಸ್ತಿ ಸೇರಿದಂತೆ ಒಟ್ಟು 23 ಕೋಟಿ 41 ಲಕ್ಷ ರೂ. ಆಸ್ತಿ ಇರುವುದಾಗಿ ಘೋಷಿಸಿದ್ದಾರೆ. ಇದರ ಜೊತೆಯಲ್ಲಿ ಒಂದೂವರೆ ಕೋಟಿ ರೂ. ಸಾಲವೂ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.


ಸುಮಲತಾ ಸಲ್ಲಿಸಿರುವ ಅಫಿಡೆವಿಟ್ ಪ್ರಕಾರ, ಅವರ ಬಳಿ 12,70, 363 ರೂಪಾಯಿ ನಗದು ಹಣವಿರುವುದಾಗಿ ಘೋಷಣೆ ಮಾಡಿದ್ದಾರೆ. 2 ಎಚ್ ಡಿ ಎಫ್ ಸಿ ಬ್ಯಾಂಕ್ ಅಕೌಂಟುಗಳಲ್ಲಿ ತಲಾ 32,34,964 ರೂ. ಹಾಗೂ 1,95,000 ರೂ., ಸಿಟಿ ಬ್ಯಾಂಕ್ ನಲ್ಲಿ 57,85,694 ರೂ., ತಲಾ 2 ಎಸ್ ಬಿ ಐ ಅಕೌಂಟುಗಳಲ್ಲಿ 28,52,278 ರೂ. ಹಾಗೂ 11,20,617 ರೂ. ಇರೋದಾಗಿ ಸುಮಲತಾ ಘೋಷಿಸಿದ್ದಾರೆ.



ಇನ್ನು ಬ್ಯಾಂಕುಗಳಲ್ಲಿ ಶೇರುಗಳು ಮತ್ತು ಬಾಂಡ್ ರೂಪದಲ್ಲಿಯು ಹೂಡಿಕೆ ಮಾಡಲಾಗಿದ್ದು, ವಿಜಯಾ ಬ್ಯಾಂಕಲ್ಲಿ 38,975 ರೂ., ಎಚ್ ಡಿ ಎಫ್ ಸಿ ಬ್ಯಾಂಕಿನ 2 ಪೆನ್ಷನ್ ಪ್ಲ್ಯಾನ್ ಗಳಲ್ಲಿ ತಲಾ 3 ಲಕ್ಷ ಹಾಗೂ 75 ಲಕ್ಷ ರೂ. ಹೂಡಿಕೆ ಮಾಡಿರುವುದಾಗಿ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.


ಕಳೆದ 5 ವರ್ಷಗಳಿಂದ ಅಂಬರೀಷ್ ಗಿಂತ ಸುಮಲತಾ ಅಂಬರೀಶ್ ಹೆಚ್ಚು ದುಡಿದಿದ್ದು, 2013ರಿಂದ 2018ರವರೆಗೆ ಅಂಬಿ ಆದಾಯ 81,66,510 ರೂ. ಆಗಿದ್ದರೆ, ಸುಮಲತಾ ಆದಾಯ 4,45,87,717 ರೂ.. ಇವುಗಳ ಜತೆಗೆ ಮೈಸೂರಿನ ತ್ರಿಭುವನ್ ಟವರ್ಸ್ ನಲ್ಲಿ 25% ಶೇರ್ ಇದ್ದು, ಅದರ ಮೌಲ್ಯ 41 ಲಕ್ಷ ರೂಪಾಯಿಯಷ್ಟಿದೆ ಎಂದು ಅವರು ನಾಮಪತ್ರದಲ್ಲಿ ತಿಳಿಸಿದ್ದಾರೆ.