ಮೈಸೂರು-ಬೆಂಗಳೂರು ನಡುವೆ ಮಹಿಳೆಯರಿಗಾಗಿ ವಿಶೇಷ ಬೋಗಿ; ರೈಲ್ವೆ ಸಚಿವರಲ್ಲಿ ಸುಮಲತಾ ಮನವಿ
ಕೆ.ಆರ್.ನಗರದಲ್ಲಿ ರೈಲ್ವೆ ಪೊಲೀಸ್ ತರಬೇತಿ ಕೇಂದ್ರ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯುವ ಸಾಧ್ಯತೆ- ಸಂಸದೆ ಸುಮಲತಾ ಅಂಬರೀಶ್
ನವದೆಹಲಿ: ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು ಮಾರ್ಗವಾಗಿ ಪ್ರತಿದಿನ ಸಾವಿರಾರು ಮಹಿಳೆಯರು ಓಡಾಡುತ್ತಿದ್ದು, ಮಂಡ್ಯದಿಂದ ಪ್ರತಿದಿನ ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ವಿಶೇಷ ಬೋಗಿಯನ್ನು ಸೇರಿಸಲು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ಬಳಿ ವಿನಂತಿಸಿದರು.
ಬಜೆಟ್‌ಗೂ ಮೊದಲು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ ಮಂಡ್ಯ ಲೋಕಸಭೆ ಸದಸ್ಯೆ ಸುಮಲತಾ ಅಂಬರೀಷ್ ತಮ್ಮ ಕ್ಷೇತ್ರದ ಹಲವಾರು ಯೋಜನೆಗಳಿಗೆ ಅಗತ್ಯ ನೆರವು ಕೋರಿದರು.
ಊರಿಂದ ಊರಿಗೆ ಕೆಲಸಕ್ಕಾಗಿ ಓಡಾಡುವ ಮಹಿಳೆಯರಿಗೆ ಅಗತ್ಯ ಭದ್ರತೆಯನ್ನು ರೈಲ್ವೆ ಇಲಾಖೆ ಒದಗಿಸಬೇಕು ಎಂದು ಒತ್ತಾಯಿಸಿದ ಸುಮಲತಾ, ಮುಂಬೈ ಮಾದರಿಯಲ್ಲಿ ವಿಶೇಷ ಮಹಿಳಾ ರೈಲುಗಳನ್ನು ಓಡಿಸಬೇಕು. ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು ಮಾರ್ಗವಾಗಿ ಸಂಚರಿಸುವ ರೈಲುಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಮಹಿಳೆಯರಿಗಾಗಿ ವಿಶೇಷ ಬೋಗಿಗಳನ್ನು ಸೇರಿಸುವುದರಿಂದ ಸಾವಿರಾರು ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸಚಿವ ಸುರೇಶ್ ಅಂಗಡಿ ಉಪಸ್ಥಿತರಿದ್ದರು.