ಬೆಂಗಳೂರು: ಸುಮಲತಾ ಅಂಬರೀಶ್ ರಾಜಕೀಯ ಪ್ರವೇಶದ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಇಂದು ತೆರೆ ಬಿದ್ದಿದ್ದು,  ಮಂಡ್ಯ ಲೋಕಸಭಾ ಕ್ಷೇತ್ರದಿಂದ ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಶ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಾರ್ಚ್ 18ರಂದು ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸುವುದಾಗಿ ತಿಳಿಸಿದ್ದ ಸುಮಲತಾ ಇಂದು ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿರುವ ಸುಮಲತಾ, ಮಾರ್ಚ್ 20ರಂದು ಬೆಳಿಗ್ಗೆ 10 ಗಂಟೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ.


ಚುನಾವಣೆಯಿಂದ ನನಗೆ ಸಂಬಂಧಗಳನ್ನು ಹಾಳು ಮಾಡಿಕೊಳ್ಳಲು ಇಷ್ಟವಿಲ್ಲ. ನಾನು ಕಾಂಗ್ರೆಸ್ ರೆಬಲ್ ಅಲ್ಲ, ನಾನು ಯಾವ ಪಕ್ಷಕ್ಕೂ ಸೇರಿಲ್ಲ, ಹಾಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದರು.


ಜನರ ತೀರ್ಮಾನವೇ ಅಂತಿಮ:
ನಾನು ರಾಜಕಾರಣಿಯಲ್ಲ, ನನಗೆ ರಾಜಕೀಯದ ಬಗ್ಗೆ ಏನೂ ಗೊತ್ತಿಲ್ಲ. ನನ್ನ ಪಾಡಿಗೆ ನಾನು ಅಭಿ ನೆಮ್ಮದಿಯಿಂದ ಜೀವಿಸಬಹುದಿತ್ತು. ಅಂಬರೀಷ್ ತೀರಿಕೊಂಡಾಗ ನಾನು ಕತ್ತಲೆಯ ಮನಸ್ಥಿತಿಯಲ್ಲಿದ್ದೆ. ಅಂತಹ ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಂಬರೀಷ್ ಅಭಿಮಾನಿಗಳು ನನ್ನಲ್ಲಿ ಧೈರ್ಯ ತುಂಬಿದ್ದರು. ಜನರ ಒತ್ತಾಯೆ ಇಂದ ನಾನು ರಾಜಕೀಯಕ್ಕೆ ಬಂದೆ. ಅವರ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾನು ರಾಜಕಾರಣಕ್ಕೆ ಪ್ರವೇಶಿಸುತ್ತಿದ್ದೇನೆ. ಚುನಾವಣೆಯಲ್ಲಿ ಗೆದ್ದರೆ ಜನರು ಯಾವ ಪಕ್ಷಕ್ಕೆ ಹೋಗಿ ಅಂತಾರೋ ಅಲ್ಲಿಗೆ ಹೋಗುವೆ, ಜನರ ತೀರ್ಮಾನವೇ ಅಂತಿಮ ಎಂದು ಸುಮಲತಾ ತಿಳಿಸಿದರು.


ಚುನಾವಣೆಯಲ್ಲಿ ಸೋಲು-ಗೆಲುವಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಂದು ವೇಳೆ ಗೆಲುವು ಸಾಧಿಸಿದರೆ ಅದು ಮಂಡ್ಯದ ಜನತೆಯ ಗೆಲುವೇ ಹೊರತು, ನನ್ನ ಗೆಲುವಲ್ಲ ಎಂದು ಸುಮಲತಾ ತಿಳಿಸಿದರು.


ಈ ಪತ್ರಿಕಾಗೋಷ್ಠಿಯಲ್ಲಿ ನಟರಾದ ದರ್ಶನ್, ಯಶ್, ಹಿರಿಯ ನಟ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದರು.