ಯಡಿಯೂರಪ್ಪ ವಿಡಿಯೋ ಪರಿಗಣಿಸಲು ಒಪ್ಪಿದ ಸುಪ್ರೀಂ ಕೋರ್ಟ್
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬಿಜೆಪಿ ಕೋರ್ ಕಮಿಟಿಯಲ್ಲಿ ಆಡಿದ್ದ ಮಾತುಗಳು `ಆಪರೇಷನ್ ಕಮಲ`ಕ್ಕೆ ಸಾಕ್ಷಿಯಾಗಿವೆ.
ನವದೆಹಲಿ: ನಮ್ಮ ಮೇಲೆ ವಿಶ್ವಾಸ ಇಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾದರು ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾತುಗಳನ್ನು ಒಳಗೊಂಡ ವಿಡಿಯೋವನ್ನು ಅನರ್ಹ ಶಾಸಕರ ಪ್ರಕರಣದ ತೀರ್ಪು ಪ್ರಕಟಿಸುವ ಮೊದಲು ಪರಿಗಣಿಸಬೇಕೆಂಬ ಕಾಂಗ್ರೆಸ್ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬಿಜೆಪಿ ಕೋರ್ ಕಮಿಟಿಯಲ್ಲಿ ಆಡಿದ್ದ ಮಾತುಗಳು 'ಆಪರೇಷನ್ ಕಮಲ'ಕ್ಕೆ ಸಾಕ್ಷಿಯಾಗಿವೆ. ಹಾಗಾಗಿ ಅನರ್ಹ ಶಾಸಕರ ಪ್ರಕರಣದ ತೀರ್ಪು ಪ್ರಕಟಿಸುವ ಮೊದಲು ಯಡಿಯೂರಪ್ಪ ಅವರ ಮಾತುಗಳನ್ನು ಪರಿಶೀಲಿಸಿ ಪರಿಗಣಿಸಬೇಕೆಂದು ಸೋಮವಾರ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟಿಗೆ ಯಡಿಯೂರಪ್ಪ ಅವರ ವಿಡಿಯೋ ಸಲ್ಲಿಸಿ ಮನವಿ ಮಾಡಿಕೊಂಡಿದ್ದರು.
ಇಂದು ಕಾಂಗ್ರೆಸ್ ಪಕ್ಷದ ಹೊಸ ದೂರಿನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠದ ಎದುರು ವಾದ ಮಂಡಿಸಿದ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್, ಇದೊಂದು ಹೊಸ ಬೆಳವಣಿಗೆಯಾಗಿದೆ. ಗೃಹಸಚಿವ ಅಮಿತ್ ಷಾ ಅವರ ಸೂಚನೆ ಅನ್ವಯ ಶಾಸಕರು ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಕೋರ್ಟ್ಗೆ ಮನವರಿಕೆ ಮಾಡಲು ಯತ್ನಿಸಿದರು.
ಆಗ ಮಧ್ಯಪ್ರವೇಶಿಸಿದ ನ್ಯಾಯಪೀಠವು, ‘ಏನಿದೆ ಈ ಆಡಿಯೋದಲ್ಲಿ?, ಅನರ್ಹ ಶಾಸಕರ ಬಗ್ಗೆ ವಿಚಾರಣೆ ನಡೆಸುವಾಗ ಆಡಿಯೋವನ್ನು ಪರಿಗಣಿಸುತ್ತೇವೆ. ಅನರ್ಹರ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀರ್ಪು ಸಿದ್ಧಗೊಳ್ಳುವ ಹಂತದಲ್ಲಿದೆ. ಈ ಹಂತದಲ್ಲಿ ಆಡಿಯೋವನ್ನು ಗಂಭೀರವಾಗಿ ಪರಿಗಣಿಸಿದರೆ ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ನೋಟಿಸ್ ನೀಡಬೇಕಾಗುತ್ತದೆ. ಇದರಿಂದ ತೀರ್ಪು ಪ್ರಕಟಿಸುವುದು ತಡವಾಗಲಿದೆ' ಎಂದು ಹೇಳಿ ವಿಚಾರಣೆ ಮುಕ್ತಾಯಗೊಳಿಸಿತು.
ತಮ್ಮ ವಿಧಾನಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿದ್ದ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ (ಈಗ ಮಾಜಿ) ಆದೇಶ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠ ಈಗಾಗಲೇ ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿದೆ. ತೀರ್ಪು ಈ ವಾರವೇ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈ ನಡುವೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅನರ್ಹ ಶಾಸಕರ ರಾಜೀನಾಮೆ ನೀಡಿದ್ದ ಆಡಿದ್ದಾರೆನ್ನಲಾದ ಮಾತುಗಳಿರುವ ವಿಡಿಯೋ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ನಾಯಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾತ್ರ ಕೂಡ ಇದೆ ಎಂದು ಹೇಳಿ ಬಿಜೆಪಿಯ ರಾಷ್ಟ್ರೀಯ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.