ಬೆಂಗಳೂರು: ಎನ್‌ಜಿಟಿ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮೇ 4, 2016 ರಂದು ಕೆರೆ ಹಾಗೂ ನೀರಿನ ಸುತ್ತಲಿನ ಬಫರ್ ವಲಯಗಳನ್ನು ವಿಸ್ತ್ರರಿಸಬೇಕೆಂದು ನೀಡಿದ್ದ ತೀರ್ಪನ್ನು ವಜಾಗೊಳಿಸಬೇಕೆಂದು ಸಲ್ಲಿಸಿದ್ದ ಕರ್ನಾಟಕದ ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ಪುರಸ್ಕರಿಸಿದೆ.


ಈ ಕುರಿತು ಆರ್‌.ಟಿ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಬೆಂಗಳೂರಿಗೆ ಮಾತ್ರ ಕೆರೆಗಳ ಬಫರ್‌ ಜೋನ್‌ನನ್ನು 75 ಮೀಟರ್‌ ವರೆಗೆ ವಿಸ್ತರಿಸಬೇಕೆಂದು ಎನ್‌ಜಿಟಿ ಆದೇಶ ನೀಡಿತ್ತು. ಇತರೆ ನಗರಗಳಿಗೆ 15 ರಿಂದ 35 ಮೀಟರ್‌ಬಫರ್‌ ಜೋನ್‌ ಸಾಕೆಂದಿರುವ ಎನ್‌ಜಿಟಿ‌ ಬೆಂಗಳೂರಿಗೆ ಮಾತ್ರ 75 ಮೀಟರ್ ಅಳವಡಿಸಿಕೊಳ್ಳುವಂತೆ ಸೂಚಿಸಿತ್ತು. 


ಎನ್‌ಜಿಟಿ ಆದೇಶದ ಪ್ರಕಾರ ಹೋದರೆ ನಗರದಲ್ಲಿ 36 ಸಾವಿರಕ್ಕೂ ಹೆಚ್ಚು ಮನೆಗಳನ್ನು ಒಡೆದು ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅಪೀಲು ಹಾಕಿದ್ದೆವು. ಇದೀಗ ಆದೇಶ ನಮ್ಮ ಪರವಾಗಿದೆ. ಆದೇಶದ ಸಂಪೂರ್ಣ ಪ್ರತಿ ಕೈಸೇರಿದ ಬಳಿಕ ಸಂಪೂರ್ಣವಾಗಿ ವಿಶ್ಲೇಷಿಸಲಾಗುವುದು ಎಂದರು.