ರಾಜ್ಯದ ಉಪ ಚುನಾವಣೆ ಮುಂದೂಡಲು ಸುಪ್ರೀಂ ಕೋರ್ಟ್ ನಕಾರ
ಮುಂದಿನ ಸೋಮವಾರ (ನವೆಂಬರ್ 11)ರಿಂದ ಅನರ್ಹ ಶಾಸಕರ 15 ಕ್ಷೇತ್ರಗಳಲ್ಲಿ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದೆ. ಸುಪ್ರೀಂ ಕೋರ್ಟ್ಗೆ ನವೆಂಬರ್ 9ರಿಂದ ನವೆಂಬರ್ 12 ರವರೆಗೆ ರಜೆ ಇರುವುದರಿಂದ ತೀರ್ಪು ಬರುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿ ಎಂದು ಅನರ್ಹ ಶಾಸಕರು ತಮ್ಮ ವಕೀಲರ ಮೂಲಕ ಶುಕ್ರವಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿಕೊಂಡರು. ಆದರೆ ಸುಪ್ರೀಂ ಕೋರ್ಟ್ ಅನರ್ಹ ಶಾಸಕರ ಮನವಿಯನ್ನು ತಿರಸ್ಕರಿಸಿತು.
ನವದೆಹಲಿ: ಮುಂದಿನ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗುವ ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಪ್ರಕ್ರಿಯೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ.
ತಮ್ಮ ವಿಧಾನಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಹೊರಡಿಸಿದ್ದ ಆದೇಶ ರದ್ದುಗೊಳಿಸುವಂತೆ ರಾಜ್ಯದ 17 ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಈಗಾಗಲೇ ಸುಪ್ರೀಂ ಕೋರ್ಟ್ ಸುದೀರ್ಘವಾಗಿ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದೆ. ಈ ನಡುವೆ ಮುಂದಿನ ಸೋಮವಾರ (ನವೆಂಬರ್ 11)ರಿಂದ ಅನರ್ಹ ಶಾಸಕರ 15 ಕ್ಷೇತ್ರಗಳಲ್ಲಿ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದೆ. ಸುಪ್ರೀಂ ಕೋರ್ಟ್ಗೆ ನವೆಂಬರ್ 9ರಿಂದ ನವೆಂಬರ್ 12 ರವರೆಗೆ ರಜೆ ಇರುವುದರಿಂದ ತೀರ್ಪು ಬರುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿ ಎಂದು ಅನರ್ಹ ಶಾಸಕರು ತಮ್ಮ ವಕೀಲರ ಮೂಲಕ ಶುಕ್ರವಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿಕೊಂಡರು. ಆದರೆ ಸುಪ್ರೀಂ ಕೋರ್ಟ್ ಅನರ್ಹ ಶಾಸಕರ ಮನವಿಯನ್ನು ತಿರಸ್ಕರಿಸಿತು.
ಅನರ್ಹ ಶಾಸಕರ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಶುಕ್ರವಾರ ಇಲ್ಲದ ಕಾರಣ ಅನರ್ಹ ಶಾಸಕರ ಪರ ವಕೀಲ ಮುಖುಲ್ ರೋಹ್ಟಗಿ ನ್ಯಾಯಮೂರ್ತಿ ಎನ್.ವಿ. ರಮಣ ಅವರಿದ್ದ ಮತ್ತೊಂದು ದ್ವಿಸದಸ್ಯ ಪೀಠದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕೆಂದು ಮನವಿ ಮಾಡಿಕೊಂಡರು. ಇದಕ್ಕೆ ಸ್ಪೀಕರ್ ಪರ ವಕೀಲ ಕಪಿಲ್ ಸಿಬಲ್ ಆಕ್ಷೇಪ ವ್ಯಕ್ತಪಡಿಸಿ ಚುನಾವಣಾ ಆಯೋಗ ಅನರ್ಹರಿಗಾಗಿಯೇ ಚುನಾವಣೆ ನಡೆಸುತ್ತಿದೆಯೇ? ಇದಕ್ಕೆ ಕೋರ್ಟ್ ಅವಕಾಶ ಕಲ್ಪಿಸಬಾರದು ಎಂದರು.
ನ್ಯಾಯಮೂರ್ತಿ ಎನ್.ವಿ. ರಮಣ 'ಈಗಾಗಲೇ ಪ್ರಕರಣದ ವಿಚಾರಣೆ ಮುಗಿದು ತೀರ್ಪು ಪ್ರಕಟಿಸುವ ಸಮಯ ಸನ್ನಿಹಿತವಾಗಿದೆ. ಈ ಹಂತದಲ್ಲಿ ಹೊಸ ಮನವಿಗಳನ್ನು ಪುರಸ್ಕರಿಸಲು ಸಾಧ್ಯವಿಲ್ಲ' ಎಂದು ಹೇಳಿದರು. ಆಗ 'ಕಡೆಯ ಪಕ್ಷ ಚುನಾವಣೆ ಮುಂದೂಡುವ ಬಗ್ಗೆ ಹೊಸ ಅರ್ಜಿ ಹಾಕಿಕೊಳ್ಳಲು ಅವಕಾಶ ಮಾಡಿಕೊಡಿ, ಹೊಸ ಅರ್ಜಿಯನ್ನು ಪರಿಶೀಲಿಸಿ' ಎಂದು ಮುಕುಲ್ ರೋಹ್ಟಗಿ ವಿನಂತಿಸಿಕೊಂಡರು. ಮುಕುಲ್ ರೋಹ್ಟಗಿ ಮನವಿಗೆ ಪ್ರತಿಕ್ರಿಯಿಸಿ 'ಮುಂದಿನ ಬುಧವಾರ (ನವೆಂಬರ್ 13) ಅರ್ಜಿ ಹಾಕಿ, ನೋಡೋಣ' ಎಂದು ನ್ಯಾಯಮೂರ್ತಿ ಎನ್.ವಿ. ರಮಣ ತಿಳಿಸಿದರು.