ನವದೆಹಲಿ: ಅನರ್ಹತೆ ಪ್ರಶ್ನಿಸಿ 17 ಶಾಸಕರು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಆಲಿಸಿದ ನ್ಯಾ. ಎನ್.ವಿ. ರಮಣ ನೇತೃತ್ವದ ನ್ಯಾ. ಸಂಜೀವ ಖನ್ನಾ ಹಾಗೂ ನ್ಯಾ. ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆಯನ್ನು ಬುಧವಾರ(ಸೆ.25)ಕ್ಕೆ ಮುಂದೂಡಿದೆ.


COMMERCIAL BREAK
SCROLL TO CONTINUE READING

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ಅಗತ್ಯವಿದೆ ಎಂದು ತಿಳಿಸಿರುವ ಪೀಠ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಇದಲ್ಲದೆ ತಮ್ಮನ್ನು ಪ್ರತಿವಾದಿಗಳಾಗಿ ಮಾಡುವಂತೆ ಮನವಿ ಮಾಡಿ ಕೇವಿಯಟ್ ಸಲ್ಲಿಸಿದ್ದ ಹಿನ್ನೆಲೆಯಲ್ಲಿ, ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. ಜೊತೆಗೆ ಸ್ಪೀಕರ್ ಕಚೇರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಿಗೂ ಕೂಡ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.


ಇಂದು ನಡೆದ ವಿಚಾರಣೆ ಸಂದರ್ಭದಲ್ಲಿ ಅನರ್ಹರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ರಾಜೀನಾಮೆ ಸಲ್ಲಿಸಿದ್ದ ಶಾಸಕರಿಗೆ ಒಂದು ವಾರ ಮೊದಲೇ ನೋಟಿಸ್ ನೀಡಿ ವಿಚಾರಣೆ ನಡೆಸಬೇಕೆಂಬ ನಿಯಮವಿದೆ. ಆದರೆ ಯಾವುದೇ ನೋಟಿಸ್ ಜಾರಿ ಮಾಡದೆ ಸ್ಪೀಕರ್ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ರಾಜೀನಾಮೆ ವೈಯಕ್ತಿಕ ಹಾಗೂ ಸ್ವಯಂ ಪ್ರೇರಣೆ ಆಗಿದ್ದರೆ ಅದನ್ನು ಸ್ವೀಕರಿಸಬಹುದು. ಆದರೂ ಯಾವುದೇ ವಿಚಾರಣೆ ನಡೆಸದೆ ಇವರನ್ನು ಅನರ್ಹಗೊಳಿಸಲಾಗಿದೆ. ಜೊತೆಗೆ ಈ ವಿಧಾನಸಭಾ ಅವಧಿ ಮುಗಿಯುವವರೆಗೂ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಸ್ಪೀಕರ್ ಆದೇಶವಿತ್ತಿದ್ದಾರೆ. ಇದೀಗ ಉಪಚುನಾವಣೆ ಘೋಷಣೆಯಾಗಿದ್ದು, ಅನರ್ಹ ಶಾಸಕರಿಗೆ ಸ್ಪರ್ಧೆಗೆ ಅವಕಾಶ ಇಲ್ಲದಿರುವುದರಿಂದ ಸಮಸ್ಯೆ ಎದುರಾಗಿದೆ ಎಂದರು.


ಈ ಸಂದರ್ಭದಲ್ಲಿ ಆರ್ಟಿಕಲ್ 361/ಬಿರ ಪ್ರಕಾರ ಅನರ್ಹರಾದವರು ಆ ವಿಧಾನಸಭಾ ಅವಧಿ ಮುಗಿಯುವವರೆಗೂ ಮರು ಆಯ್ಕೆ ಆಗುವ ವಿಷಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ವಿವರಿಸಿದ ಮುಕುಲ್ ರೋಹ್ಟಗಿ, ರಾಜೀನಾಮೆ ನೀಡಿದ ಬಳಿಕ ಪಕ್ಷ ಬದಲಾವಣೆಗೂ ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದರು.


ಸ್ಪೀಕರ್ ಆದೇಶದನ್ವಯ 2023ರವರೆಗೆ ಸ್ಪರ್ಧೆಗೆ ಅವಕಾಶ ಇಲ್ಲದಂತಾಗಿದೆ. ಸರ್ವೋಚ್ಚ ನ್ಯಾಯಾಲಯ ಈಗ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕು. ಇಲ್ಲವೇ ಉಪಚುನಾವಣೆಗೆ ತಡೆ ನೀಡಬೇಕು ಎಂದು ರೋಹ್ಟಗಿ ಮನವಿ ಮಾಡಿದರು.


ಅನರ್ಹ ಶಾಸಕರ ಸ್ಪರ್ಧೆಗೆ ಯಾವುದೇ ಆಕ್ಷೇಪವಿಲ್ಲ ಎಂದು ಚುನಾವಣಾ ಆಯೋಗದ ಪರ ವಕೀಲರಾದ ರಾಕೇಶ್ ದ್ವಿವೇದಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.


ಆದರೆ ಚುನಾವಣಾ ಆಯೋಗದ ಅಭಿಪ್ರಾಯಕ್ಕೆ ಕಾಂಗ್ರೆಸ್ ಪರ ವಕೀಲರಾದ ಕಪಿಲ್ ಸಿಬಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಕ್ಕೆ ನೀವಿನ್ನೂ ಭಾಗೀದಾರರಲ್ಲಾ. ನಿಮ್ಮ ಅಭಿಪ್ರಾಯವನ್ನು ಸ್ವಯಂ ಪ್ರೇರಣೆಯಿಂದ ತಿಳಿಸುವುದು ಸರಿಯಲ್ಲ ಎಂದು ಸಿಬಲ್ ಆಕ್ಷೇಪ ವ್ಯಕ್ತಪಡಿಸಿದರು.


ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಈ ಬಗ್ಗೆ ಸುದೀರ್ಘ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದು, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಇದರಿಂದಾಗಿ ಅನರ್ಹ ಶಾಸಕರ ಆತಂಕ ಇನ್ನೂ ಹೆಚ್ಚಾಗಿದೆ.