ನವದೆಹಲಿ: ತಮ್ಮ‌‌ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜ್ಯದಲ್ಲಿ ಬಿಜೆಪಿ‌ ಸರ್ಕಾರ ಬರಲು ಕಾರಣರಾಗಿರುವ ಅನರ್ಹರ ಶಾಸಕರಿಗೆ ತಮ್ಮನ್ನು ಅನರ್ಹಗೊಳಿಸಿದ್ದ ಸ್ಪೀಕರ್ (ಈಗ ಮಾಜಿ) ರಮೇಶ್ ಕುಮಾರ್ ಅವರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ಸಂಬಂಧ ಮೂರನೇ ಬಾರಿಯೂ ಮುಖಭಂಗವಾಗಿದೆ.


COMMERCIAL BREAK
SCROLL TO CONTINUE READING

ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ವಿಳಂಬವಾದರೆ ತಮ್ಮ ರಾಜಕೀಯ ಭವಿಷ್ಯ ಮುಸುಕಾಗಬಹುದು ಎಂದು ಆತಂಕಕ್ಕೊಳಗಾಗಿರುವ ಅನರ್ಹ ಶಾಸಕರು, ಮೊದಲಿಗೆ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠದ ಮುಂದೆ ತುರ್ತು ವಿಚಾರಣೆಗೆ ಮನವಿ ಮಾಡಿದರು. ನ್ಯಾಯಪೀಠವು ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಪರಿಶೀಲನೆ ನಡೆಸಿ ವಿಚಾರಣೆಗೆ ದಿನ ನಿಗದಿ ಪಡಿಸಲಿ ಎಂದು ಆದೇಶ ನೀಡಿತ್ತು. ಬಳಿಕ ಅನರ್ಹ ಶಾಸಕರ ಪರ ವಕೀಲರು ಮೌಖಿಕವಾಗಿ ರಿಜಿಸ್ಟ್ರಾರ್ ಬಳಿ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಮತ್ತಷ್ಟು ಆತಂಕಗೊಂಡ ಅನರ್ಹ ಶಾಸಕರು 'ಪ್ರಕರಣವನ್ನು ಬೇಗ ಇತ್ಯರ್ಥ ಪಡಿಸಲು ಕಾನೂನು ಹೋರಾಟಕ್ಕೆ ಸಹಕಾರ ಕೊಡಿ' ಎಂದು ಕಳೆದ ವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಲೆ ಒತ್ತಡ ಹೇರಿದ್ದರು. ಬಿಜೆಪಿ ಹೈಕಮಾಂಡ್ ನಾಯಕರಿಂದಲೂ ಭರವಸೆ ಕೊಡಿಸಿ ಎಂದು ದುಂಬಾಲು ಬಿದ್ದಿದ್ದರು. ಜೊತೆಗೆ ವಕೀಲರನ್ನೂ ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಅನರ್ಹ ಶಾಸಕರ ಒತ್ತಡದಿಂದಾಗಿ ಸೋಮವಾರ ಮುಕುಲ್ ರೋಹ್ಟಗಿ ಸುಪ್ರೀಂ ಕೋರ್ಟಿನಲ್ಲಿ ಮತ್ತೊಮ್ಮೆ ಮನವಿ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಕಡೆ ಕ್ಷಣದಲ್ಲಿ ಮುಕುಲ್ ರೋಹ್ಟಗಿ ಮೆನ್ಷನ್ ಮಾಡಲು ನಿರಾಕರಿಸಿದರು. ಬದಲಿಗೆ ಕಿರಿಯ ವಕೀಲ ಸುಧಾಂಷು‌ ಮನವಿ ಮಾಡಿದರು.


ಅನರ್ಹ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೂಲ ಅರ್ಜಿಯು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದಿದೆ. ಆದರೀಗ ಮುಖ್ಯ ನ್ಯಾಯಮೂರ್ತಿಗಳ ಪೀಠವು ಸಂವಿಧಾನಿಕ ಪೀಠವಾಗಿ ಮಾರ್ಪಟ್ಟು ಮಹತ್ವದ ಬಾಬರಿ ಮಸೀದಿ/ರಾಮ ಮಂದಿರ ವಿವಾದದ ವಿಚಾರಣೆ ನಡೆಸುತ್ತಿರುವುದರಿಂದ ಸೋಮವಾರ ಸುಪ್ರೀಂ ಕೋರ್ಟಿನ ಎರಡನೇ ಹಿರಿಯ ನ್ಯಾಯಮೂರ್ತಿಗಳಾದ ಎನ್.ವಿ. ರಮಣ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಮೆನ್ಷನ್ ಮಾಡಲಾಗಿತ್ತು. ನ್ಯಾಯಮೂರ್ತಿ ಎನ್.ವಿ. ರಮಣ  ತುರ್ತು ವಿಚಾರಣೆಗೆ ನಿರಾಕಿಸಿದ್ದರು. ಮಂಗಳವಾರ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಮತ್ತೊಮ್ಮೆ ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆಯೇ ಮನವಿ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಮಂಗಳವಾರ‌ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಯಾವುದೇ ಪ್ರಕರಣದ ಮೆನ್ಷನ್ ಮಾಡಲು ಅವಕಾಶ ಇರಲಿಲ್ಲ. ಇದರಿಂದಾಗಿ ಮತ್ತೊಮ್ಮೆ ಅನರ್ಹ ಶಾಸಕರ ಪ್ರಕರಣವನ್ನು ತುರ್ತಾಗಿ ವಿಚಾರಣೆಗಾಗಿ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆಯೇ ಮಂಡಿಸಲಾಯಿತು. ಮುಕುಲ್ ರೋಹ್ಟಗಿ ಮಂಗಳವಾರವೂ ಪ್ರಕರಣದ ಮೆನ್ಷನ್ ಮಾಡಲು ಮನಸ್ಸು ಮಾಡಲಿಲ್ಲ.‌ ಅವರ ಬದಲು ವಕೀಲ ಗಿರಿ ಮೆನ್ಷನ್ ಮಾಡಿದರು.


ಗಿರಿ ಅವರ ಮೆನ್ಷನ್ ಅನ್ನು ಗಂಭೀರವಾಗಿ ಪರಿಗಣಿಸದ ನ್ಯಾಯಮೂರ್ತಿಗಳ ಪೀಠ‌ ಮತ್ತೊಮ್ಮೆ 'ತುರ್ತಾಗಿ ವಿಚಾರಣೆ ನಡೆಯುವ ವಿಚಾರವನ್ನು' ರಿಜಿಸ್ಟ್ರಾರ್ ನೋಡಿಕೊಳ್ಳುತ್ತಾರೆ ಎಂದು ಹೇಳಿದರು. ಈ ಮುಖಾಂತರ ಅನರ್ಹ ಶಾಸಕರಿಗೆ ಮೂರನೇ ಬಾರಿಗೂ ಭಾರೀ ಮುಖಭಂಗವಂತಾಗಿದೆ.