ವಿಶ್ವವಿದ್ಯಾನಿಲಯಗಳಿಗೆ ಅ.15ರೊಳಗೆ ಸಿಂಡಿಕೇಟ್ ಸದಸ್ಯರ ನೇಮಕ: ಜಿ.ಟಿ.ದೇವೇಗೌಡ
ಅಕ್ಟೋಬರ್ 15ರೊಳಗೆ ನಿಸ್ಪಕ್ಷಪಾತವಾಗಿ ಸಿಂಡಿಕೇಟ್ ಸದಸ್ಯರ ನೇಮಕ ಮಾಡಲಾಗುವುದು ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಅಕ್ಟೋಬರ್ 15ರೊಳಗೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಉನ್ನತ ಶಿಕ್ಷಣ ಇಲಾಖೆ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ನೇಮಕಾತಿಗೆ 3 ಸಾವಿರ ಅರ್ಜಿಗಳು ಬಂದಿದ್ದರೂ ಇದುವರೆಗೂ ಸರ್ಕಾರ ನಾಮನಿರ್ದೇಶನ ಮಾಡಿಲ್ಲ, ಸಿಂಡಿಕೇಟ್ ಸದಸ್ಯತ್ವಕ್ಕೆ ಲಾಬಿ ನಡೆಯುತ್ತಿದೆ ಎಂಬ ವದಂತಿಗಳು ನನ್ನ ಕಿವಿಗೆ ಬಿದ್ದಿವೆ. ಆದರೆ ಇಂಥ ಯಾವುದೇ ಸನ್ನಿವೇಶಗಳು ಇಲ್ಲ. ಅಕ್ಟೋಬರ್ 15ರೊಳಗೆ ನಿಸ್ಪಕ್ಷಪಾತವಾಗಿ ಸಿಂಡಿಕೇಟ್ ಸದಸ್ಯರ ನೇಮಕ ಮಾಡಲಾಗುವುದು ಎಂದು ಜಿ.ಟಿ.ದೇವೇಗೌಡ ಹೇಳಿದರು.
ಎಲ್ಲಾ ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಗಳಿಂದ ಸರ್ಕಾರದ ನಾಮ ನಿರ್ದೇಶನವನ್ನು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಹಿಂತೆಗೆದುಕೊಂಡು ಎರಡು ತಿಂಗಳಾಗಿದ್ದು, ಇದುವರೆಗೂ ಹೊಸ ನಾಮ ನಿರ್ದೇಶನ ಇನ್ನೂ ಹೊರಡಿಸಿಲ್ಲ. ಈ ಹಿನ್ನೆಲೆಯಲ್ಲಿ ಜ.ಟಿ.ದೇವೇಗೌಡರು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.