ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೋನಿಯಾ ಗಾಂಧಿ ಕರೆ
ತಮಗೆ ಎರಡನೇ ಭಾರಿಗೆ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಸ್ಥಾನ ನೀಡಿದ್ದಕ್ಕೆ ಗುರುವಾರ ಎಸ್. ಆರ್. ಪಾಟೀಲ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಧನ್ಯವಾದ ಹೇಳಿದರು.
ನವದೆಹಲಿ: ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಅವರಿಗೆ ಸಲಹೆ ನೀಡಿದ್ದಾರೆ.
ತಮಗೆ ಎರಡನೇ ಭಾರಿಗೆ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಸ್ಥಾನ ನೀಡಿದ್ದಕ್ಕೆ ಗುರುವಾರ ಎಸ್. ಆರ್. ಪಾಟೀಲ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಧನ್ಯವಾದ ಹೇಳಿದರು. ಈ ಸಂದರ್ಭದಲ್ಲಿ ಇಬ್ಬರು ನಾಯಕರು ಕರ್ನಾಟಕದ ಪ್ರಸಕ್ತ ರಾಜಕಾರಣ ಮತ್ತು ಪ್ರವಾಹ ಪರಿಸ್ಥಿತಿ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.
ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಆರ್. ಪಾಟೀಲ್, ನನಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎರಡನೇ ಬಾರಿ ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನ ನೀಡಿದ್ದಕ್ಕೆ ಧನ್ಯವಾದ ತಿಳಿಸಿದ್ದೇನೆ. ನಂತರ ರಾಜ್ಯದ ಪ್ರವಾಹದ ಬಗ್ಗೆ ಸೋನಿಯಾ ಜೊತೆ ಚರ್ಚಿಸಿದ್ದೇನೆ. ಇದೇ ವೇಳೆ ಸೋನಿಯಾ ಗಾಂಧಿ ಕೆಲವು ಸಲಹೆ ನೀಡಿದರು.
ಯುವಕರನ್ನು ಜೊತೆಗೆ ಇಟ್ಟುಕೊಂಡು ಪಕ್ಷ ಕಟ್ಟಿ. ಎಲ್ಲಾ ನಾಯಕರೊಂದಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ. ಮುಖ್ಯವಾಗಿ ಮೇಲ್ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟು ಕೆಲಸ ಮಾಡಿ. ಇಲ್ಲದೇ ಹೋದರೆ ನಮ್ಮ ಪಕ್ಷದವರೇ ನಮ್ಮನ್ನು ಸೋಲಿಸಲಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸಿದರೆ ಮುಂದೆ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರುವ ಸಾಧ್ಯತೆ ಇದೆ ಎಂದು ಹೇಳಿರುವುದಾಗಿ ಎಸ್.ಆರ್. ಪಾಟೀಲ್ ತಿಳಿಸಿದರು.