ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ್ ಕುಮಾರ್ ಕಣಕ್ಕೆ?
ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದರೆ ನಾನು ಸ್ಪರ್ಧೆಗೆ ಸಿದ್ಧ ಎಂದು ತೇಜಸ್ವಿನಿ ಅನಂತ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು: ಲೋಕಸಭಾ ಘೋಷಣೆ ದಿನಾನಕ ಪ್ರಕಟವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಬಿರುಸಿನ ಸಿದ್ಧತೆ ನಡೆಸತೊಡಗಿವೆ. ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕೇಂದ್ರದ ಮಾಜಿ ಸಚಿವ, ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಸಂಸದರೂ ಆಗಿದ್ದ ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಈ ಬೆನ್ನಲ್ಲೇ ಇಂದು ಮಾಜಿ ಸಚಿವ ಆರ್.ಅಶೋಕ್ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿನಿ ಅವರು, ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದರೆ ನಾನು ಸ್ಪರ್ಧೆಗೆ ಸಿದ್ಧ. ಆದರೆ, ಕಾರ್ಯಕರ್ತರು, ಮುಖಂಡರ ಅಭಿಪ್ರಾಯವೇ ಅಂತಿಮ ಎಂದರು.
"ಬೆಂಗಳೂರಿಗಾಗಿ ಅಶೋಕ್ ಸಾಕಷ್ಟು ಕೆಲಸ ಮಾಡಿದ್ದಾರೆ. ಹೀಗಾಗಿ ಅವರನ್ನೂ ಪ್ರತ್ಯೇಕವಾಗಿ ಭೇಟಿ ಮಾಡಿ ಬಂದಿದ್ದೇನೆ. ಇನ್ನು ಹಲವು ನಾಯಕರ ಭೇಟಿ ಮಾಡಿ ಚರ್ಚೆ ಮಾಡಲಿದ್ದೇನೆ. ನಂತರ ಮುಂದುವರಿಯುತ್ತೇನೆ. ಸ್ಪರ್ಧೆ ಮಾಡುವ ಬಗ್ಗೆ ಮುಂದೆ ಎಲ್ಲವೂ ತಿಳಿಯಲಿದೆ. ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದರೆ, ಸ್ಪರ್ಧೆ ಮಾಡುವ ಬಗ್ಗೆ ನಿಮಗೆ ಎಲ್ಲವೂ ತಿಳಿಯುತ್ತದೆ. ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರ ಅಭಿಪ್ರಾಯವೇ ಅಂತಿಮ" ಎಂದು ಹೇಳಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಗೋವಿಂದರಾಜ ನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭ ನಗರ, ಬಿಟಿಎಂ ಲೇಔಟ್, ಜಯನನಗರ ಹಾಗೂ ಬೊಮ್ಮನಹಳ್ಳಿ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳಿವೆ.