ಸದಾನಂದ ಗೌಡರ ನಿರ್ಧಾರಕ್ಕೆ ತೇಜಸ್ವಿನಿ ಅನಂತಕುಮಾರ್ ಬೆಂಬಲ!
ತಮ್ಮನ್ನು ಅಭಿನಂದಿಸಲು ಬರುವ ಅಭಿಮಾನಿಗಳಿಗೆ ಸದಾನಂದ ಗೌಡರು ಕೋರಿಕೆಯೊಂದನ್ನು ಇಟ್ಟಿದ್ದಾರೆ.
ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಹೊರಬಂದಿದ್ದು ಸ್ಪಷ್ಟ ಬಹುಮತದೊಂದಿಗೆ ನರೇಂದ್ರ ಮೋದಿಯವರು ಮತ್ತೆ ಪ್ರಧಾನಮಂತ್ರಿ ಹುದ್ದೆ ಅಲಂಕರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ 30 ರಂದು ಸಂಜೆ 7 ಗಂಟೆಗೆ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣಾಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬರೋಬರಿ 25 ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ತಮ್ಮ ನೆಚ್ಚಿನ ನಾಯಕರು ಗೆದ್ದ ಬಳಿಕ ಅವರಿಗೆ ಹಾರ, ಬೊಕ್ಕೆ ನೀಡಿ ಅಭಿನಂದಿಸುವುದು ಸರ್ವೇ ಸಾಮಾನ್ಯ.
ಆದರೆ, ಹಾರ, ಬೊಕ್ಕೆ ಹಿಡಿದು ಅಭಿನಂದಿಸಲು ಬರುವ ಮತದಾರರಲ್ಲಿ ಸದಾನಂದ ಗೌಡರು ಕೋರಿಕೆಯೊಂದನ್ನು ಇಟ್ಟಿದ್ದಾರೆ.
ನನ್ನನ್ನು ಅಭಿನಂದಿಸಲು ಬರುವ ನನ್ನ ಮತದಾರ ಬಂಧುಗಳಲ್ಲಿ ಕೋರಿಕೆ. ನೀವು ಬರುವಾಗ ದಯವಿಟ್ಟು ಹಾರ, ಬೊಕ್ಕೆ ತರಬೇಡಿ. ಬಳಿಕ ಅದು ಅನುಪಯುಕ್ತ. ನೀವು ಮಾತ್ರ ಬಂದು ಹೃತ್ಪೂರ್ವಕ ವಾಗಿ ಅಭಿನಂದಿಸಿದರೆ ಸಾಕು ಅದೇ ನನಗೆ ಆಶೀರ್ವಾದ. ನಿಮಗೇನಾದರೂ ಕೊಡಲೇ ಬೇಕೆನಿಸಿದರೆ, ಗಿಡ ತನ್ನಿ. ಉತ್ತಮ ಪುಸ್ತಕ ತನ್ನಿ. ಬೇರೆಯವರೊಂದಿಗೆ ಹಂಚಿ ಕೊಳ್ಳಬಹುದು ಎಂದು ಸದಾನಂದ ಗೌಡರು ಟ್ವೀಟ್ ಮಾಡಿದ್ದರು.
ಸದಾನಂದ ಗೌಡರ ಈ ನಿರ್ಧಾರವನ್ನು ಬೆಂಬಲಿಸಿರುವ ತೇಜಸ್ವಿನಿ ಅನಂತ್ ಕುಮಾರ್, ತಮ್ಮ ವಿಚಾರ ಸರಿಯಾಗಿದೆ ಸರ್. ಗಿಡಗಳನ್ನು ನಮಗೆ(ಅದಮ್ಯ ಚೇತನಕ್ಕೆ @adamya_chetana) ಕೊಡಿ ನಾವು ಭಾನುವಾರ ನೆಡುತ್ತೇವೆ ಎಂದಿದ್ದಾರೆ.