ಬೆಂಗಳೂರು: ಬಿಬಿಎಂಪಿಯು ನೆದರ್‌ಲ್ಯಾಂಡ್‌ ನಿಯೋಗದೊಂದಿಗೆ ಇಂದು 'ಸ್ವೀಪ್‌ ಸ್ಮಾರ್ಟ್‌' ಯೋಜನೆಯ ಒಪ್ಪಂದ ಮಾಡಿಕೊಂಡಿತು. 


COMMERCIAL BREAK
SCROLL TO CONTINUE READING

ಮಾರಪ್ಪನಪಾಳ್ಯದಲ್ಲಿರುವ  ಒಣ- ಹಸಿ ತ್ಯಾಜ್ಯಾ ಸಂಗ್ರಹಣಾ ಕೇಂದ್ರದಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಒಪ್ಪಂದಕ್ಕೆ ಸಹಿ ಹಾಕಿದರು. 


ಬಳಿಕ ಮಾತನಾಡಿದ ಸಚಿವ ಡಾ. ಜಿ. ಪರಮೇಶ್ವರ, ನಗರದ ನಿವಾಸಿಗಳು ಕೇವಲ ಶೇಕಡ 35 ರಷ್ಟು ಒಣ ಹಾಗೂ ಹಸಿ ತ್ಯಾಜ್ಯ ಬೇರ್ಪಡಿಸಿ ನೀಡುತ್ತಿದ್ದಾರೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಸವಿಂಗಡನೆ ಮಾಡಲಾಗುತ್ತಿದೆ. ಈ ಪ್ರಮಾಣವನ್ನು ಹೆಚ್ಚಿಸುವ ಹಾಗೂ ತ್ಯಾಜ್ಯ ವಿಂಗಡನೆಯಲ್ಲಿ ಆಧುನಿಕತೆ ತರಲು ನೆದರ್‌ ಲ್ಯಾಂಡ್‌ ನಿಯೋಗದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಶೇಕಡ 35ರಷ್ಟು ಹಣಕಾಸಿನ ನೆರವು ನೀಡುವ ಜೊತೆಗೆ ಅವರಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನವನ್ನೂ ಇಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. 


ಇಲ್ಲಿ ಒಣತ್ಯಾಜ್ಯದಲ್ಲಿಯೇ ರಿಸೈಕಲ್‌ ಮಾಡುವಂಥ ತ್ಯಾಜ್ಯಗಳನ್ನು ವಿಂಗಡಿಸುವ ಕೆಲಸ ಮಾಡಲು ಬೀದಿಯಲ್ಲಿ ಪೇಪರ್‌ ಆಯುವವರನ್ನೇ ಕೆಲಸಕ್ಕೆ ತೆಗೆದುಕೊಂಡು ಅವರಿಗೂ ಉದ್ಯೋಗ ನೀಡಿದ್ದೇವೆ ಎಂದರು.


ಕಸ ಸಂಸ್ಕರಣೆ ವಿಷಯದಲ್ಲಿ ರಾಜ್ಯ ಸರಕಾರ ಹಲವು ಯೋಜನೆ ಕೈಗೆತ್ತಿಕೊಂಡಿದೆ. ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಅನುಷ್ಠಾನ ಪ್ರಗತಿಯಲ್ಲಿದೆ. ಬಿಬಿಎಂಪಿ ಪ್ರಸ್ತುತ 11,600 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ.‌ ಕಳೆದ ಬಾರಿ 8 ಸಾವಿರ ಕೋಟಿಗೆ ಒಪ್ಪಿಗೆ ನೀಡಲಾಗಿತ್ತು. ಈ ಐದು ವರ್ಷದಲ್ಲಿ ನಗರದ ಅಭಿವೃದ್ಧಿಗಾಗಿ 50 ಸಾವಿರ ಕೋಟಿ ರೂ. ವ್ಯಯಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ನೆದರ್‌ಲ್ಯಾಂಡ್‌‌ನ ಜನರಲ್‌ ಕೌನ್ಸಿಲ್ ಗೆರ್ಟ್‌ ಹೈಕೂಪ್‌ ,  ಮೇಯರ್‌ ಗಂಗಾಂಬಿಕೆ, ಶಾಸಕ ಕೆ. ಗೋಪಾಲಯ್ಯ ಉಪಸ್ಥಿತರಿದ್ದರು.