ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಅನ್ವರ್‌ ಮಾಣಿಪ್ಪಾಡಿ ನೇತೃತ್ವದಲ್ಲಿ ಸಮಿತಿ ರಚಿಸಿ, ವಕ್ಫ್‌ ಭೂ ಕಬಳಿಕೆಯ ವರದಿ ರೂಪಿಸಿತ್ತು. ಆದರೆ ಈಗ ಇದರಲ್ಲಿ ಅವ್ಯವಹಾರ ಆಗಿದೆ ಎಂದು ಹೇಳಲು ಕೂಡ ಕಾಂಗ್ರೆಸ್‌ ಕೂಡ ತಯಾರಿಲ್ಲ. ಕಾಂಗ್ರೆಸ್‌ ನಾಯಕರು ಲಕ್ಷಾಂತರ ಎಕರೆ ವಕ್ಫ್ ಜಾಗವನ್ನು ಕಬಳಿಸಿ ಮಾರಾಟ ಮಾಡಿರುವುದು ಈ ತನಿಖಾ ವರದಿಯಲ್ಲಿ ಬೆಳಕಿಗೆ ಬಂದಿತ್ತು. ಆ ಪ್ರಕ್ರಿಯೆಯಲ್ಲಿ ಬಿಜೆಪಿ ಸರ್ಕಾರ ನೋಟಿಸ್‌ ನೀಡಿದೆ. ಒಂದು ವೇಳೆ ತಪ್ಪಾಗಿ ನೋಟಿಸ್‌ ನೀಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಈಗಿನ ಸರ್ಕಾರ ಕಠಿಣ ಕ್ರಮ ವಹಿಸಲಿ ಎಂದರು. 


COMMERCIAL BREAK
SCROLL TO CONTINUE READING

ಈಗ ವಕ್ಫ್‌ ಮಂಡಳಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲು ಮುಂದಾಗಿದೆ. ಬಡ ರೈತರಿಗೆ ನೋಟಿಸ್‌ ನೀಡುವುದು ಸರಿಯಲ್ಲ. ಆಗಲೂ ರೈತರಿಗೆ ನೋಟಿಸ್‌ ನೀಡಿದ್ದರೆ ಆ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲಿ. ನಾವು ಯಾವುದೇ ಅಧಿಕಾರಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. 


ಮುಡಾ ಹಗರಣ ಈ ರಾಜ್ಯ ಕಂಡ ಅತಿ ದೊಡ್ಡ ಹಗರಣ. ಇದು ಕೇವಲ 14 ಸೈಟುಗಳಲ್ಲದೆ, ಬಡವರಿಗೆ ಸೇರಬೇಕಾದ ನೂರಾರು ಸೈಟುಗಳು ಬೇರೆಯವರ ಪಾಲಾಗಿದೆ. ಇದರ ತನಿಖೆ ಎಂದಾಕ್ಷಣ ಹಿರಿಯ ಅಧಿಕಾರಿಗಳು ದಾಖಲೆಗಳನ್ನು ಸಹಜವಾಗಿಯೇ ತಿದ್ದಿರುತ್ತಾರೆ. ಹೀಗಾಗಿ ಇದನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದೇವೆ. ಇದರಿಂದ ಬಡವರಿಗೆ ನ್ಯಾಯ ದೊರೆತು, ಸರ್ಕಾರದ ಖಜಾನೆಗೆ ನ್ಯಾಯಯುತವಾಗಿ ಆದಾಯ ಬರಲಿದೆ. ಸಚಿವ ಭೈರತಿ ಸುರೇಶ್‌ ಎಷ್ಟು ದಾಖಲೆಗಳನ್ನು ಎತ್ತಿಕೊಂಡು ಹೋಗಿದ್ದಾರೋ ಗೊತ್ತಿಲ್ಲ. ಅದಕ್ಕೆ ಮುನ್ನವೇ ಐಐಎಸ್‌ ಅಧಿಕಾರಿಗಳು ದಾಖಲೆ ಕದಿಯುವ ಹಂತಕ್ಕೆ ತಲುಪಿದ್ದಾರೆ. ರಾಜ್ಯದ ಆಡಳಿತ ವ್ಯವಸ್ಥೆ ಕುಸಿದಿದೆ ಎಂಬುದು ಇದಕ್ಕೆ ಸಾಕ್ಷಿ ಎಂದರು. 


ಉಪಚುನಾವಣೆಯ ಫಲಿತಾಂಶ ಎಂದರೆ ಭ್ರಷ್ಟಾಚಾರಕ್ಕೆ ಸಿಕ್ಕ ಕ್ಲೀನ್‌ ಚಿಟ್‌ ಅಲ್ಲ. ಇದು ರಾಜ್ಯದ ಮತದಾರರ ತೀರ್ಪಲ್ಲ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ. ಜೆಡಿಎಸ್‌ ಮತ್ತು ಬಿಜೆಪಿ ಸಭೆ ನಡೆಸಿ, ಅಧಿವೇಶನದಲ್ಲಿ ಮಾಡುವ ಹೋರಾಟದ ರೂಪರೇಷೆ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. 


ಚನ್ನಪಟ್ಟಣದಲ್ಲಿ ಅಲ್ಪಸಂಖ್ಯಾತರು ನಿಖಿಲ್‌ ಕುಮಾರಸ್ವಾಮಿ ಅವರಿಗೆ ಮತ ಹಾಕಿಲ್ಲ ಎಂಬುದು ಕಂಡುಬಂದಿದೆ. ಉಳಿದ ಸಮುದಾಯಗಳು ಕೂಡ ಬೆಂಬಲ ನೀಡಿಲ್ಲ. ಇಲ್ಲಿ ಹಣಬಲ, ಅಧಿಕಾರ ಬಲ ಕೆಲಸ ಮಾಡಿದೆ. ಇಲ್ಲಿ ಒಕ್ಕಲಿಗ ನಾಯಕತ್ವವೇನೂ ಸೃಷ್ಟಿಯಾಗಿಲ್ಲ. ಡಿ.ಕೆ.ಶಿವಕುಮಾರ್‌ ಅವರಿಗೆ ಡಿ.ಕೆ.ಸುರೇಶ್‌ ಅವರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವರು ಎಂದೂ ಒಕ್ಕಲಿಗ ನಾಯಕರಾಗಿಲ್ಲ ಎಂದರು. 


ದಿಕ್ಕು ತಪ್ಪಿಸುವ ಸರ್ಕಾರ
ವಕ್ಫ್‌ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಅವರು ಟ್ವೀಟ್‌ ಮಾಡಿದ್ದಾರೆ. 


ವಕ್ಫ್ ವಿಚಾರ ಮೊದಲ ಪ್ರಸ್ತಾಪವಾದಾಗ ಸರ್ಕಾರ ಯಾರಿಗೂ ನೋಟೀಸು ಕಳಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳಿದ್ದರು. ನಂತರ ವಿಜಯಪುರ ಜಿಲ್ಲೆಯಲ್ಲಿ ರೈತರು ಸಿಡಿದ್ದೆದ್ದಾಗ, ನೋಟಿಸು ವಾಪಸ್ಸು ಪಡೆದು, ಈ ಪ್ರಕ್ರಿಯೆ ನಿಲ್ಲಿಸುತ್ತೇವೆ ಎಂದು ಮತ್ತೊಂದು ಸುಳ್ಳು ಹೇಳಿದ್ದರು. ಆದರೆ ರೈತರಿಗೆ, ಮಠ-ಮಂದಿರಗಳಿಗೆ ನೋಟಿಸ್‌ ಕಳಿಸುವುದು, ರಾತ್ರೋರಾತ್ರಿ ತರಾತುರಿಯಲ್ಲಿ ದಾಖಲೆಗಳನ್ನು ತಿದ್ದುವುದು ಮಾತ್ರ ನಿಲ್ಲಲೇ ಇಲ್ಲ. ಜೊತೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇದೆಲ್ಲಾ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ನಡೆಯುತ್ತಿದೆ ಎಂದು ಹೇಳುವ ವಿಡಿಯೋ ಬಹಿರಂಗ ಆದಮೇಲೆ ಸುಳ್ಳು ಸಂಪೂರ್ಣ ಬಯಲಾಯಿತು. ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಮತ್ತೊಂದು ಸುಳ್ಳನ್ನು ಸಿಎಂ ಸಿದ್ದರಾಮಯ್ಯ ಹೇಳಿದರು. ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಕೊಡಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮುಸ್ಲಿಂ ಶಾಸಕರು ಆಗಸ್ಟ್ 24, 2024 ರಂದು ಸಿಎಂಗೆ ಪತ್ರ ಬರೆದಿದ್ದರು. ಅದೇ ದಿನ ಈ ಪತ್ರವನ್ನು ಪರಿಶೀಲಿಸಿ ಮಂಡಿಸಿ ಎಂದು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಲಾಗಿತ್ತು. ಈ ಸಂಬಂಧ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರಲೂ ಸಹ ಅನುಮೋದನೆ ನೀಡಲಾಗಿದೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. 


ವಕ್ಫ್ ವಿಚಾರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಅತಿಹೆಚ್ಚು ನೋಟಿಸ್‌ ನೀಡಲಾಗಿದೆ ಎಂದು ಮತ್ತೊಂದು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗಿದೆ. ಓಲೈಕೆ ರಾಜಕಾರಣಕ್ಕೆ ಇನ್ನೆಷ್ಟು ಸುಳ್ಳು ಹೇಳುತ್ತೀರಿ? ಕಾಂಗ್ರೆಸ್ ಪಕ್ಷದ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಭಾವಿ ಮುಖಂಡರು ಬಡವರಿಗೆ ಸೇರಿದ ಸಾವಿರಾರು ಎಕರೆ ವಕ್ಫ್ ಭೂಮಿ ಕಬಳಿಸಿದ್ದಾರೆ ಎಂಬ ವರದಿ ನಮ್ಮ ಸರ್ಕಾರಕ್ಕೆ ಬಂದಿತ್ತು. ಆಗ ಆ ವರದಿಯ ಆಧಾರದ ಮೇಲೆ ತನಿಖೆ ಮಾಡಲು ಸಂಬಂಧಪಟ್ಟವರಿಗೆ ನೋಟಿಸ್‌ ನೀಡಲಾಗಿತ್ತೇ ಹೊರತು ಇದರ ಹಿಂದೆ ಯಾವುದೇ ಕುತಂತ್ರ, ಷಡ್ಯಂತ್ರ ಇರಲಿಲ್ಲ. ಇಷ್ಟಕ್ಕೂ ಬಿಜೆಪಿ ಸರ್ಕಾರ ಬಡ ರೈತರು ತಲೆತಲಾಂತರಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಕೃಷಿ ಜಮೀನುಗಳಿಗೆ, ಗೋಮಾಳಗಳಿಗೆ, ಸ್ಮಶಾನಗಳಿಗೆ, ನೂರಾರು ವರ್ಷ ಇತಿಹಾಸ ಇರುವ ಸರ್ಕಾರಿ ಶಾಲೆಗಳಿಗೆ, ದೇವಸ್ಥಾನಗಳಿಗೆ, ಮಠ-ಮಾನ್ಯಗಳಿಗೆ, ಪಾರಂಪರಿಕ ತಾಣಗಳಿಗೆ, ಜನಸಾಮಾನ್ಯರ ಆಸ್ತಿ-ಪಾಸ್ತಿಗಳಿಗೆ, ಮಾಜಿ ಶಾಸಕರ ಮನೆಗಳಿಗೆ ನೋಟಿಸು ಕಳಿಸಿಲ್ಲ. ಬಡವರ ಭೂಮಿ ನುಂಗಿರುವ ದೊಡ್ಡ ದೊಡ್ಡ ತಿಮಿಂಗಿಲಗಳನ್ನು ಹಿಡಿಯುವ ಉದ್ದೇಶದಿಂದ ನೋಟಿಸು ಕೊಟ್ಟಿತ್ತು. ಇಷ್ಟಕ್ಕೂ ಈಗ ಕಾಂಗ್ರೆಸ್‌ ಸರ್ಕಾರ ಇದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಟ್ಟ ನೋಟಿಸುಗಳಲ್ಲಿ ಏನಾದರೂ ತಪ್ಪಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿ ಎಂದು ಅವರು ಆಗ್ರಹಿಸಿದ್ದಾರೆ. 


ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ ಜನರಿಗೆ ಸ್ಪಷ್ಟವಾಗಿ ಅರ್ಥವಾಗಿದೆ. ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗೆ ಮೊದಲು ಹೇಗಾದರೂ ಮಾಡಿ ಜಮೀನು ಕಬಳಿಸಬೇಕು ಎಂಬ ಕಾಂಗ್ರೆಸ್ ಪಕ್ಷದ ಷಡ್ಯಂತ್ರ, ಕುತಂತ್ರ ಬಹುಸಂಖ್ಯಾತ ಹಿಂದೂಗಳಿಗೆ ಬಹಳ ಸ್ಪಷ್ಟವಾಗಿ ಮನವರಿಕೆಯಾಗಿದೆ. ಈಗ ಮತ್ತೊಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಬಿಡಬೇಕು. ವಕ್ಫ್ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿ ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ಆದಂತೆ ಕರ್ನಾಟಕದಲ್ಲೂ ಧೂಳೀಪಟ ಆಗುವುದು ನಿಶ್ಚಿತ ಎಂದು ಅವರು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.