ಬೆಂಗಳೂರು: ಇಂದು ಹೊಸಕೋಟೆ ಕ್ಷೇತ್ರದಲ್ಲಿ 600 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಅಭಿವೃದ್ಧಿಗೆ ದುಡ್ಡೇ ಇಲ್ಲ ಎಂದು ಹೇಳುತ್ತಿರುವ ಬಿಜೆಪಿಯವರಿಗೆ ಸುಳ್ಳೇ ಮನೆದೇವರು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.ಅವರು ಇಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


COMMERCIAL BREAK
SCROLL TO CONTINUE READING

ನಾವು ಅಧಿಕಾರಕ್ಕೆ ಬಂದು 9 ತಿಂಗಳ ಒಳಗೆ 5 ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, ರೂ. 36 ಸಾವಿರ ಕೋಟಿ ವೆಚ್ಚವಾಗಿದ್ದರೂ, ನಮ್ಮ ಖಜಾನೆ ಖಾಲಿಯಾಗಿಲ್ಲ. ಬಜೆಟ್ ನಲ್ಲಿ ಅಭಿವೃದ್ಧಿಗೆ 1.20 ಲಕ್ಷ ಕೋಟಿ ಪಾಲು ಇಟ್ಟಿದ್ದೇವೆ. 2024-25 ಕ್ಕೆ 3.71 ಲಕ್ಷ ಕೋಟಿ ರೂ.ಗಳ ಬಜೆಟ್ ನ್ನು ಮಂಡಿಸಿದ್ದೇನೆ. ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಬಜೆಟ್ ಗಿಂತ ನಮ್ಮ ಬಜೆಟ್ ನ ಗಾತ್ರ ದೊಡ್ಡದು. ಇದು ರಾಜ್ಯದ ಅಭಿವೃದ್ಧಿಯ ಗುರುತಲ್ಲವೇ? ಎಂದು ಪ್ರಶ್ನಿಸಿದರು.


ಇದನ್ನೂ ಓದಿ: 52 ಗೋಲ್ಡ್ ಮೆಡಲ್‌ ಮುಡಿಗೇರಿಸಿಕೊಂಡ ಹರಿಹರದ ಹುಡುಗಿ, ಅಂತಾರಾಷ್ಟ್ರೀಯ ಯೋಗ ಚಾಂಪಿಯನ್


ರಾಜ್ಯದ ಜನರ ಕೈಗಳಿಗೆ ಮಧ್ಯವರ್ತಿಗಳ ಕಾಟವಿಲ್ಲದೇ ಹಣ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರವೊಂದರಲ್ಲೇ ಗೃಹಲಕ್ಷ್ಮಿ ಯೋಜನೆಯಡಿ 52 ಸಾವಿರ ಮಹಿಳೆಯರಿಗೆ 2000 ರೂ. ಹಣ ನೀಡಲಾಗುತ್ತಿದೆ. ಶಕ್ತಿ ಹಾಗೂ ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಹಣದಿಂದ ಜನರಿಗೆ ಉಳಿತಾಯವಾಗುತ್ತಿದೆ. ಈ ಎಲ್ಲ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ತಲಾ 4 ರಿಂದ 5 ಸಾವಿರ ರೂ. ದೊರೆಯುತ್ತಿದೆ.ಗ್ಯಾರಂಟಿಗಳ ಮೂಲಕ ಈ ವರ್ಷ 36 ಸಾವಿರ ಕೋಟಿ, ಮುಂದಿನ ವರ್ಷ 52 ಸಾವಿರ ಕೋಟಿ ರೂಪಾಯಿ ಜನರ ಜೇಬಿಗೆ ನೇರವಾಗಿ ಹೋಗುತ್ತಿದ್ದು, ಅವರ ಆರ್ಥಿಕ ಶಕ್ತಿ ವೃದ್ಧಿಯಾಗುತ್ತದೆ. ಶಕ್ತಿ ಯೋಜನೆಯನ್ನು ಪ್ರಶಂಸಿಸಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆಯವರು ನನಗೆ ಪತ್ರ ಬರೆದಿದ್ದರು ಎಂದು ಹೇಳಿದರು.


ಇದನ್ನೂ ಓದಿ: ಸರಣಿ ಗೆಲುವಿನ ಬೆನ್ನಲ್ಲೇ ಟೆಸ್ಟ್ ಆಟಗಾರರಿಗೆ ಬಿಸಿಸಿಐನಿಂದ ಸಿಹಿಸುದ್ದಿ: ಸಂಬಳದ ಹೊರತಾಗಿ ಸಿಗಲಿದೆ ವಿಶೇಷ ವೇತನ


2008-2013ರವರೆಗೆ ಬಿಜೆಪಿಯವರ ಸರ್ಕಾರವಿತ್ತು. ಆಗ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ನೀರು ತುಂಬುವ ಯೋಜನೆಗಳ ಬಗ್ಗೆ ಗಮನಹರಿಸಲಿಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಆನೇಕಲ್ ಕ್ಷೇತ್ರಗಳಲ್ಲಿ ಕೆರೆಗಳು ಬತ್ತಿಹೋಗಿದ್ದು, ಅವುಗಳನ್ನು ತುಂಬಿಸುವ ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿ, ಅನೇಕಲ್, ಹೊಸಕೋಟೆ, ಕಾಡುಬೀಸನಹಳ್ಳಿ ಯೋಜನೆಗಳ ಮೂಲಕ ಕೆರೆ ತುಂಬಿಸಲಾಯಿತು.


ನೆಲಮಂಗಲ, ತುಮಕೂರು ಜಿಲ್ಲೆಗಳಿಗೆ ನೀರು ಕೊಡುವ ಕೆಲಸವನ್ನು ಮಾಡಿದೆವು. ಇಂದು ಉದ್ಘಾಟನೆಯಾದ 38 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 150 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿ, ಆನೇಕಲ್, ಹೊಸಕೋಟೆ ಯೋಜನೆ ಎಲ್ಲಕ್ಕೂ ಸೇರಿ 2,809 ಕೋಟಿ ರೂ.ಗಳನ್ನು ನಮ್ಮ ಸರ್ಕಾರ ವೆಚ್ಚ ಮಾಡಿದೆ. 317 ಕೆರೆಗಳನ್ನು ಮೊದಲ ಹಂತದಲ್ಲಿ ತುಂಬಿಸಲಾಗಿದೆ. ಪ್ರಗತಿಯಲ್ಲಿರುವ ಎರಡನೇ ಹಂತದ ಕಾಮಗಾರಿಗಳಿಗೆ 1,699 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. 392 ಕೆರೆಗಳನ್ನು ತುಂಬಿಸಲಾಗುತ್ತಿದೆ.


ಹೊಸದಾಗಿ ನಂದಗುಡಿ ಸೂಲಿಬೆಲೆ ಯೋಜನೆಯನ್ನೂ ಕೈಗೆತ್ತಿಕೊಂಡು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆ ತುಂಬಿಸುವ ಕೆಲಸ ಮಾಡುತ್ತೇವೆ. ಇದನ್ನು ಕೋಲಾರ, ಚಿಕ್ಕಬಳ್ಳಾಪುರ ಸುತ್ತಲಿನ ಪ್ರದೇಶಗಳಲ್ಲಿ ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ ಹೆಚ್ಚಿದ್ದು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಮಾಡಲಾಗುತ್ತಿದೆ.


ಅಂತರ್ಜಲ ಹೆಚ್ಚಾಗಿ ಕೊಳವೆಬಾವಿಗಳಿಗೆ ನೀರು ದೊರಕಬೇಕು.1200 ಅಡಿಗಳ ಆಳದಲ್ಲಿ ಕೊಳವೆಬಾವಿ ಕೊರೆಯಲಾಗುತ್ತಿತ್ತು. ಈಗ 300 ರಿಂದ 500 ಅಡಿಯೊಳಗೆ ಕೊಳಬಾವಿಗಳಿಗೆ ನೀರು ಸಿಗುತ್ತಿದೆ. ಕೆರೆಗಳಿಗೆ ನೀರು ತುಂಬಿಸಿದ್ದರಿಂದ ಇದು ಸಾಧ್ಯವಾಗಿದೆ. ಈ ಭಾಗದಲ್ಲಿ ನದಿಗಳಿಲ್ಲದಿರುವುದರಿಂದ 15 ಟಿ.ಎಂ.ಸಿ ನೀರನ್ನು ಸಂಸ್ಕರಿಸಿ ತುಂಬಿಸಲಾಗುತ್ತದೆ. ಇದರಿಂದ ರೈತರ ಆದಾಯ ಹೆಚ್ಚಳ ಮಾಡಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: "ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭವನ್ನು ಎದುರಿಸಿ ಮಲ್ಲೇಶ್ವರಂ ಸಹಕಾರಿ ಬ್ಯಾಂಕ್ ನೂರು ವರ್ಷ ಪೂರೈಸಿರುವುದು ಮಹಾ ಸಾಧನೆ"


ಗ್ಯಾರಂಟಿ ಯೋಜನಗಳಿಂದ ಬಡವರು, ಹಿಂದುಳಿದವರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರು ಆರ್ಥಿಕ ಸಾಮಾಜಿಕ ಸ್ಥಿತಿ ಬದಲಾಗುತ್ತಿದೆ. ಸಮಸಮಾಜ ನಿರ್ಮಾಣ ಮಾಡುತ್ತೇವೆ ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಧ್ಯವಾಗುವುದಿಲ್ಲ. ಸಮಸಮಾಜ ನಿರ್ಮಾಣಕ್ಕೆ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ, ಕಾರ್ಮಿಕರು, ಮಹಿಳೆಯರಿಗೆ ಆರ್ಥಿಕ ಸಾಮಾಜಿಕ ಶಕ್ತಿಯನ್ನು ತುಂಬುವ ಕೆಲಸ ಮಾಡಬೇಕು. ಆ ಕೆಲಸವನ್ನು ಗ್ಯಾರಂಟಿ ಕಾರ್ಯಕ್ರಮದ ಮೂಲಕ ಎಲ್ಲಾ ಜಾತಿಯ ಧರ್ಮದ ಜನರಿಗೆ ಶಕ್ತಿ ತುಂಬುತ್ತಿದ್ದೇವೆ ಎಂದು ಹೇಳಿದರು.


ನಾವು ಹಿಂದೆ ಅಧಿಕಾರ ದಲ್ಲಿದ್ದಾಗಲೂ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಶೂ ಭಾಗ್ಯ, ಇಂದಿರಾ ಕ್ಯಾಂಟೀನ್, ಮೈತ್ರಿ, ಮನಸ್ವಿನಿ ಕಾರ್ಯಕ್ರಮಗಳನ್ನು ರೂಪಿಸಿದ್ದೆವು. ಈಗಲೂ ನುಡಿದಂತೆ ನಡೆಯುತ್ತಿದ್ದೇವೆ. ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕ ಎಂದು ಕರೆದಿದ್ದೇವೆ. ಬಸವಾದಿ ಶರಣರಿಂದ ಪ್ರೇರೇಪಿತರಾಗಿರುವ ನಾವು ಬಡವರ ಪರವಾಗಿರುವ ಸರ್ಕಾರ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಭರವಸೆ ನೀಡಿದರು.


ಶರತ್ ಬಚ್ಚೇಗೌಡರು ಕ್ರಿಯಾಶೀಲ ಶಾಸಕರು. ಅವರು ತಮ್ಮ ತಂದೆಯನ್ನೂ ಮೀರಿ ಬೆಳೆಯುವ ಎಲ್ಲಾ ಲಕ್ಷಣಗಳೂ ಇವೆ. ಜನಪ್ರತಿನಿಧಿಗಳಿಗೆ ಜನಪರ ಕಾಳಜಿ ಮುಖ್ಯ. ಕ್ಷೇತ್ರ ಅಭಿವೃದ್ಧಿಯ ಕಾಳಜಿ ಶರತ್ ಬಚ್ಚೇಗೌಡರಲ್ಲಿ ಇದೆ. ಉತ್ತಮ ಸಂಸದೀಯ ಪಟುವಾಗಿಯೂ ಹೊರಹೊಮ್ಮುತ್ತಿದ್ದಾರೆ. ವಿಧಾನಸಭೆಯಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆಯಲ್ಲಿ ಭಾಗವಹಿಸುತ್ತಾರೆ. ಇಂಥವರು ವಿಧಾನಸಭೆಯಲ್ಲಿ ಬಹುಕಾಲ ಇರಬೇಕು ಎಂದು ಆಶಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ