ಜಾತಿ ವ್ಯವಸ್ಥೆ ನಿರ್ನಾಮವಾಗಬೇಕು- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್
ಪ್ರತಿಭೆಗೆ ಜಾತಿ ಇರುವುದಿಲ್ಲ. ವಿಶ್ವಕ್ಕೆ ಶ್ರೇಷ್ಠ ಸಂವಿಧಾನ ಕೊಟ್ಟ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಭೆಗೆ ಜಾತಿ ಅಡ್ಡ ಬರಲಿಲ್ಲ. ಸಾಲು ಮರದ ತಿಮ್ಮಕ್ಕ ಮರ ನೆಟ್ಟಿದ್ದು ಜಾತಿ ವ್ಯವಸ್ಥೆಯಿಂದಲ್ಲ.
ಚಿತ್ರದುರ್ಗ: ಆಧುನಿಕ ಯುಗದಲ್ಲಿ ಜಾತಿ ವ್ಯವಸ್ಥೆ ಎಂಬ ಪಿಡುಗನ್ನು ಸಂಪೂರ್ಣ ನಿರ್ನಾಮ ಮಾಡಿ, ಮುಂದಿನ ಪೀಳಿಗೆ ನೆಮ್ಮದಿಯಿಂದ ಜೀವನ ನಡೆಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು.
ಚಿತ್ರದುರ್ಗದ ಬೆಳಗೆರೆ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಏಕಾದಶಿ ಮಹೋತ್ಸವ ಹಾಗೂ ಬೆಳಗೆರೆ ಛಲವಾದಿ ಕಟ್ಟೇಮನೆ ಮಹಾಸಂಸ್ಥಾನದ ವತಿಯಿಂದ ಕೊಡಮಾಡುವ 'ಛಲವಾಧಿ ರತ್ನ' ಪ್ರಶಸ್ತಿಯನ್ನು ಸಾಲು ಮರದ ತಿಮ್ಮಕ್ಕ ಅವರಿಗೆ ಪ್ರಧಾನ ಮಾಡಿ ಮಾತಾಡಿದ ಅವರು, ಸಾವಿರಾರು ವರ್ಷದ ಹಿಂದೆ ಪೂರ್ವಜರು ವೃತ್ತಿ ಆಧಾರಿತವಾಗಿ ಜಾತಿ ವ್ಯವಸ್ಥೆ ನಿರ್ಮಾಣ ಮಾಡಿದರು. ಇಂದು, ಈ ವ್ಯವಸ್ಥೆ ದೊಡ್ಡ ಮಟ್ಟದಲ್ಲಿ ಬೇರೂರಿದ್ದು, ಮೇಲು, ಕೀಳು, ಅತೀ ಕೀಳುಜಾತಿ ಎಂದೆಲ್ಲಾ ಗುರುತಿಸುತ್ತಾರೆ. ಬೇರಾವ ದೇಶದಲ್ಲೂ ಇಷ್ಟು ಪ್ರಮಾಣದ ಜಾತಿ ವ್ಯವಸ್ಥೆ ಬಲವಾಗಿಲ್ಲ. ನಮ್ಮ ದೇಶದಲ್ಲಿ ಜಾತಿಯೇ ಮೊದಲ ಆದ್ಯತೆ ಪಡೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತ ಸಮುದಾಯದ ಸಾಕಷ್ಟು ಜನ ವಿದ್ಯಾವಂತರಾಗಿದ್ದಾರೆ. ಎಲ್ಲರೂ ವಿದ್ಯಾವಂತರಾದರೆ ಈ ವ್ಯವಸ್ಥೆಯನ್ನು ಮಟ್ಟ ಹಾಕಬಹುದು. ದಲಿತರು ಒಂದು ಹೊತ್ತು ಊಟ ಬಿಟ್ಟಾದರೂ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿಸಿ. ಆಗ ಅಧಿಕಾರ ನಮ್ಮ ಕೈಗೆ ಬರಲಿದೆ ಎಂದು ಹೇಳಿದರು.
ಪ್ರತಿಭೆಗೆ ಜಾತಿ ಇರುವುದಿಲ್ಲ. ವಿಶ್ವಕ್ಕೆ ಶ್ರೇಷ್ಠ ಸಂವಿಧಾನ ಕೊಟ್ಟ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಭೆಗೆ ಜಾತಿ ಅಡ್ಡ ಬರಲಿಲ್ಲ. ಸಾಲು ಮರದ ತಿಮ್ಮಕ್ಕ ಮರ ನೆಟ್ಟಿದ್ದು ಜಾತಿ ವ್ಯವಸ್ಥೆಯಿಂದಲ್ಲ. ಅವರಲ್ಲಿನ ಪ್ರತಿಭೆಯಿಂದ ಎಂದು ಶ್ಲಾಘಿಸಿದರು.
ಸಾಲುಮರದ ತಿಮ್ಮಕ್ಕ ಆದರ್ಶ;
ಸಾಲುಮರದ ತಿಮ್ಮಕ್ಕ ಬಡತನದಿಂದ ಬಂದವರು. ಮಕ್ಕಳಾಗಿಲ್ಲ ಎಂಬ ನಿರಾಶೆಗೆ ಬೀಳದೇ ಗಿಡ ಬೆಳೆಸಿ, ಮಕ್ಕಳಂತೆ ಆರೈಕೆ ಮಾಡಿದ್ದಾರೆ. ಅವರು ಶಾಲೆಗೆ ಹೋದವರಲ್ಲ, ಆದರೆ ತನಕೆ ಇದ್ದ ಪ್ರಜ್ಞೆಯಿಂದ ಜಾತಿ ಧರ್ಮ ಮೀರಿ ಸಮಾಜ ಒಪ್ಪುವ ಕೆಲಸ ಮಾಡಿದ್ದಾರೆ. ಸಾಧನೆ ಮಾಡಿದ ಸಾಲುಮರದ ತಿಮ್ಮಕ್ಕ ನಮ್ಮೆಲ್ಲರಿಗೂ ಆದರ್ಶ ಎಂದು ಪರಮೇಶ್ವರ್ ಇದೇ ಸಂದರ್ಭದಲ್ಲಿ ಹೇಳಿದರು.