ಮಂಗಳೂರು: ಕರ್ನಾಟಕದ ಅತಿವೃಷ್ಠಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಪರಿಶೀಲಿಸಿ ವರದಿ ನೀಡಲು ಕೇಂದ್ರ ಸರ್ಕಾರ ಕಳುಹಿಸಿರುವ ಹಿರಿಯ ಅಧಿಕಾರಿಗಳ ತಂಡವು ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದರು.


COMMERCIAL BREAK
SCROLL TO CONTINUE READING

ಕೇಂದ್ರ ತಂಡಕ್ಕೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಮೊದಲಿಗೆ ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಬಂಟ್ವಾಳದ ತುಂಬೆ ಡ್ಯಾಂ ಸೈಟಿಗೆ ಕೇಂದ್ರ ತಂಡ ಸ್ಥಳೀಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದೆ. ಡ್ಯಾಂ ರೀಟೈನಿಂಗ್ ವಾಲ್ ಹಾನಿಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅನಂತರ, ಕೇಂದ್ರ ತಂಡವು ಕಳೆದ ಜೂನ್ ತಿಂಗಳಲ್ಲಿ ಕುಸಿದು ಬಿದ್ದಿರುವ ಮೂಲರಪಟ್ಣ ಸೇತುವೆ ಸ್ಥಳಕ್ಕೆ ಭೇಟಿ ನೀಡಿತು. ಮಂಗಳೂರಿನ ಕುಪ್ಪೆಪದವಿನಿಂದ ಬಂಟ್ವಾಳ ಸಂಪರ್ಕಿಸುವ ಮೂಲರಪಟ್ಣ ಸೇತುವೆ ಇದಾಗಿದೆ.


ವಿಟ್ಲಪಡ್ನೂರ್ ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ತಂಡ ಅಡಕೆ ಕೊಳೆ ರೋಗದಿಂದ ನಷ್ಟ ಸಂಭವಿಸಿದ ಮಾಹಿತಿ ಸಂಗ್ರಿಹಿಸಿತು. ಆನಂತರ ಕಾಣಿಯೂರಿಗೆ ಭೇಟಿ ನೀಡಿ ಅಡಕೆ ತೋಟ ಹಾನಿ ಆಗಿರುವುದರ ಪರಿಶೀಲನೆ ಮಾಡಿತು.  


ಇಂದಬೆಟ್ಟು ಗ್ರಾಮ ಪಂಚಾಯತು ವ್ಯಾಪ್ತಿಯ ಕಲ್ಲಾಜೆ ಶಾಲೆ ಸಂಪರ್ಕ ರಸ್ತೆ ಬದಿ ಮಣ್ಣು ಕುಸಿತ ಉಂಟಾದ ಪ್ರದೇಶಕ್ಕೆ ಕೂಡ ಭೇಟಿ ನೀಡಿ ನಷ್ಟದ ಮಾಹಿತಿ ಪಡೆದುಕೊಳ್ಳಲಾಗಿದೆ. ಕಲ್ಲಾಜೆ ರಸ್ತೆ ಹಾನಿ ಆಗಿರುವ ಸ್ಥಳ ಪರಿಶೀಲಿಸಿ ನಂತರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ತಂಡ ತದನಂತರ, ಶಿರಾಡಿ ಘಾಟಿ ಪ್ರದೇಶದಲ್ಲಿ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಿರುವ ಭೂಕುಸಿತದ ಬಗ್ಗೆ ಸಮೀಕ್ಷೆ ತಂಡ ನಡೆಸಿತು. 


ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಉಪಕಾರ್ಯದರ್ಶಿ ಭರತೇಂದ್ರ  ಕುಮಾರ್ ಸಿಂಗ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್ ಮತ್ತು ರಸ್ತೆ ಸಾರಿಗೆ, ಹೆದ್ದಾರಿ ಇಲಾಖೆಯ ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ನಿಯೋಗದಲ್ಲಿದ್ದರು.