ಬೆಂಗಳೂರು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಿಶ್ಚಿತ, ಈ ಬಗ್ಗೆ ಸಂಶಯವೇ ಇಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಹೊಸ ಬಾಂಬ್ ಸಿಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‌ಡಿಡಿ,  ರಾಜಕಾರಣದಲ್ಲಿ ಅನೇಕ ಏಳು ಬೀಳು ಇರುತ್ತೆ. ಮೈತ್ರಿ ಸರ್ಕಾರ ಮಾಡಲೇಬೇಕು ಅಂತ ನಂಗೇನು ಇರ್ಲಿಲ್ಲ. ದೆಹಲಿ ನಾಯಕರು ಬಂದು ನಿಮ್ಮ ಮಗನನ್ನ ಮುಖ್ಯಮಂತ್ರಿ ಮಾಡಬೇಕು ಎಂದರು ವಿಧಿಯಲ್ಲದೆ ಒಪ್ಪಿಕೊಂಡೆವು ಎಂದು ಹೇಳಿದರು.


ನನ್ನ ಜೊತೆಯಲ್ಲೇ ಇದ್ದು, ನನ್ನ ಜೊತೆಯಲ್ಲೇ ಬೆಳೆದವರು ನನ್ನನ್ನು ಬಿಟ್ಟು ಹೋದರು. ನಾನು ಧೃತಿಗೆಡದೆ ಮುಂದೆ ಬಂದಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದು ಎಂದು ಕಾಂಗ್ರೆಸ್‌ನವರು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಅಂದು ಓಡೋಡಿ ಬಂದರು ಎಂದು ವ್ಯಂಗ್ಯವಾಡಿದರು.


ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ:
ಸಾರ್ವತ್ರಿಕ ಚುನಾವಣೆ ನಂತರ ಹೈಕಮಾಂಡ್ ಸ್ವಲ್ಪ ಶಕ್ತಿ ಕಳೆದುಕೊಂಡಿದೆ ಎಂದ ಹೆಚ್‌ಡಿಡಿ, ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಎಲ್ಲಾ ಕಾಂಗ್ರೆಸ್ ನಾಯಕರ ಕೈಯಲ್ಲಿದೆ. ಜೆಡಿಎಸ್ ಜೊತೆ ಹೊರಟ್ರೆ ಕಾಂಗ್ರೆಸ್ ಪಕ್ಷ ಹೋಗುತ್ತೆ ಅನ್ನೋ ಸಂಕಟ ಇದೆ. ಹೀಗಾಗಿ ಒಂದು ಮಂತ್ರಿ ಸ್ಥಾನವನ್ನೂ ಹೆಚ್ಚುವರಿಯಾಗಿ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದೇವೆ. ಎಲ್ಲವನ್ನೂ ಸಹಿಸಿಕೊಂಡಿದ್ದೇನೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು. 


ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದಿದ್ದೆ. ಕಾಂಗ್ರೆಸ್‌ಗೆ ಸರ್ಕಾರ ನಡೆಸುವ ಮನಸ್ಸಿದೆಯಾ? ಇಲ್ವಾ? ನಂಗೆ ಗೊತ್ತಿಲ್ಲ. ಇಲ್ಲಿ ಎಲ್ಲದಕ್ಕು ಆಕ್ಷನ್ ಆಂಡ್ ರಿಯಾಕ್ಷನ್ ನೆಸೆಸರಿ ಇಲ್ಲ ಎಂದು ಅವರು ಹೇಳಿದರು.


ಲೋಕಸಭಾ ಚುನಾವಣಾ ಸೋಲಿಗೆ ನಾವು ಕಾರಣ ಎಂದಾದರೆ ಬಹಿರಂಗವಾಗಿಯೇ ಹೇಳಲಿ:
ಲೋಕಸಭಾ ಚುನಾವಣೆಗೆ ನಾವು ಕಾರಣವೇ ಎಂದು ಪ್ರಶ್ನಿಸಿದ ದೇವೇಗೌಡರು, ಹಾಗೇನಾದರೂ ಇದ್ದಾರೆ ಬಹಿರಂಗವಾಗಿಯೇ ಹೇಳಬಹುದು ಎಂದು ಕಾಂಗ್ರೆಸ್ ನಾಯಕರಿಗೆ ತಿಳಿಸಿದರು. ಅಲ್ಲದೆ, ಹಾಲಿ ಸಂಸದರಿರುವ ಕ್ಷೇತ್ರ ನಮಗೆ ಬೇಡ ಎಂದಿದ್ದೆ. ತುಮಕೂರು ಕ್ಷೇತ್ರವನ್ನು ನಾವು ಕೇಳಲೇ ಇಲ್ಲ. ಕಾಂಗ್ರೆಸ್ ಸೋತಿರುವ ಕ್ಷೇತ್ರವನ್ನೇ ಕೊಡಿ ಎಂದಿದ್ದೆವು. ಆದರೆ ಮೈಸೂರು ಕ್ಷೇತ್ರವನ್ನು ಉಳಿಸಿಕೊಳ್ಳುವ ಸಲುವಾಗಿ ತುಮಕೂರು ಕ್ಷೇತ್ರವನ್ನು ಬಿಟ್ಟು ಕೊಟ್ಟರು ಎಂದು ಅವರು ತಿಳಿಸಿದರು.


ಏಕಾಗ್ರತೆ, ಆರೋಗ್ಯಕ್ಕೆ ಯೋಗ ಅಗತ್ಯ:
ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗದ ಮಹತ್ವದ ಬಗ್ಗೆ ತಿಳಿಸಿದ ಹೆಚ್.ಡಿ. ದೇವೇಗೌಡರು, ಪ್ರಾಚೀನ ಕಾಲದಿಂದಲೂ ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡಲಾಗುತ್ತಿದೆ. ನಾವು ವಿದ್ಯಾರ್ಥಿಗಳಾಗಿದ್ದಾಗ ಅಂದಿನ ಉಪದ್ಯಾಯರು ಸೂರ್ಯ ನಮಸ್ಕಾರ ಮಾಡಿಸುತ್ತಿದ್ದರು.  ಸೂರ್ಯ ನಮಸ್ಕಾರ ಮಾಡೋದು ಬಹಳ ಒಳ್ಳೆಯದು. ಬಾಲ್ಯದಿಂದಲೂ ನಾನು ಯೋಗ ಅಭ್ಯಾಸ ಮಾಡ್ತಿದ್ದೆ. ಇತ್ತೀಚೆಗೆ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಯೋಗಕ್ಕೆ ಹೆಚ್ಚು ಮಹತ್ವ ನೀಡಿದರು. ರಾಂಚಿಯಲ್ಲಿಯೂ ಸಹ ಅವರು ಭಾಗಿಯಾಗಿ ಯೋಗ ಮಾಡಿದ್ದಾರೆ. ಯುವ ಪೀಳಿಗೆಗಳಿಗೆ ಯೋಗದ ಅವಶ್ಯಕತೆ ಇದೆ. ಏಕಾಗ್ರತೆ, ಆರೋಗ್ಯಕ್ಕೆ ಯೋಗ ಅಗತ್ಯ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗಕ್ಕೆ ಕೊಟ್ಟ ಮಹತ್ವವನ್ನು ನಾನು ಸ್ವಾಗತಿಸುತ್ತೇನೆ ಎಂದರು.