ಹಾಲು ಕುಡಿದ ಮಕ್ಕಳೇ ಬದುಕುವುದು ಕಷ್ಟವಿರುವಾಗ, ವಿಷ ಕುಡಿದ ಮಕ್ಕಳು ಬದುಕುತ್ತವಾ? ಸಿದ್ದರಾಮಯ್ಯ
ಮಧ್ಯಂತರ ಚುನಾವಣೆ ಯಾವ ಸಮಯದಲ್ಲಾದರೂ ಬರಬಹುದು, ಈ ಉದ್ದೇಶಕ್ಕಾಗಿ ಪಕ್ಷ ಬಲಪಡಿಸುವಂತೆ ನಮ್ಮವರಿಗೆ ಕರೆ ನೀಡಿದ್ದೇನೆ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
ಹುಬ್ಬಳ್ಳಿ: ಮಧ್ಯಂತರ ಚುನಾವಣೆ ಯಾವ ಸಮಯದಲ್ಲಾದರೂ ಬರಬಹುದು, ಈ ಉದ್ದೇಶಕ್ಕಾಗಿ ಪಕ್ಷ ಬಲಪಡಿಸುವಂತೆ ನಮ್ಮವರಿಗೆ ಕರೆ ನೀಡಿದ್ದೇನೆ. ಯಡಿಯೂರಪ್ಪನವರ ಸರ್ಕಾರ ಹೆಚ್ಚು ಕಾಲ ನಿಲ್ಲುವುದು ಕಷ್ಟ. ಬಂಡಾಯ ಶಾಸಕರನ್ನು ಸೇರಿಸಿಕೊಂಡು ಸರ್ಕಾರ ನಡೆಸುವುದು ಸುಲಭದ ಮಾತಲ್ಲ, 'ಹಾಲು ಕುಡಿದ ಮಕ್ಕಳೇ ಬದುಕುವುದು ಕಷ್ಟವಿರುವಾಗ, ವಿಷ ಕುಡಿದ ಮಕ್ಕಳು ಬದುಕುತ್ತವಾ?' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪ್ರವಾಹ ಪರಿಸ್ಥಿತಿ ಸಮೀಕ್ಷೆಗೆ ಕೇಂದ್ರದ ತಂಡ ಆಗಮಿಸಿದೆ. ಪ್ರವಾಹದಿಂದಾಗಿ ಸುಮಾರು 20 ಲಕ್ಷ ಎಕರೆ ಬೆಳೆ ಹಾನಿ, 80 ಜನರ ಪ್ರಾಣ ಹಾನಿಯಾಗಿದೆ, ಲಕ್ಷಾಂತರ ಮನೆಗಳು ನೆಲಸಮಗೊಂಡಿವೆ. ಸಾವಿರಾರು ಜಾನುವಾರುಗಳು ಸಾವಿಗೀಡಾಗಿವೆ. ಇದನ್ನೆಲ್ಲ ಸೂಕ್ತವಾಗಿ ಸಮೀಕ್ಷೆ ನಡೆಸಿ, ನ್ಯಾಯಯುತ ಪರಿಹಾರ ಒದಗಿಸಲಿ ಎಂದು ಒತ್ತಾಯಿಸುತ್ತೇನೆ ಎಂದರು.
ಮುಖ್ಯಮಂತ್ರಿಗಳು ಒಳಗೊಂಡಂತೆ ಸರ್ಕಾರದ ಎಲ್ಲ ಮಂತ್ರಿಗಳು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ ಸಿದ್ದರಾಮಯ್ಯ, ಇದನ್ನು ಬಿಟ್ಟು ನಿತ್ಯ ಬೆಂಗಳೂರಿನಿಂದ ದೆಹಲಿ, ದೆಹಲಿಯಿಂದ ಬೆಂಗಳೂರಿಗೆ ಓಡಾಡುತ್ತಿದ್ದರೆ ಜನರ ಕಷ್ಟ ಕೇಳುವವರಾರು? ಅನೈತಿಕ ಮಾರ್ಗದ ಮೂಲಕ ಅಧಿಕಾರ ಹಿಡಿದವರ ಕತೆಯೇ ಹೀಗೆ, ಅವರಿಗೆ ಜನಪರ ಕಾಳಜಿಯಿರಲ್ಲ ಎಂದು ಯಡಿಯೂರಪ್ಪ ಸರ್ಕಾರವನ್ನು ಲೇವಡಿ ಮಾಡಿದರು.
ಪ್ರವಾಹ ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ತಾಣ ಒದಗಿಸುವಂತೆ ಕಳೆದ ವಾರವೇ ಆಗ್ರಹಿಸಿದ್ದೆ, ಸರ್ಕಾರ ಇನ್ನೂ ಕಣ್ಣುಮುಚ್ಚಿ ಕೂತಿದೆ. ಎರಡ್ಮೂರು ಸಾವಿರ ಪರಿಹಾರ ನೀಡಿದರೆ ಕಷ್ಟ ದೂರಾಗುವುದಿಲ್ಲ. ನಷ್ಟವನ್ನು ಸರಿಯಾಗಿ ಅಂದಾಜಿಸಿ, ಪರಿಹಾರ ಒದಗಿಸಬೇಕು. ಇದಕ್ಕೆ ಬೇಕಾದ ಅನುದಾನವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರವೇ ಭರಿಸಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.