ಬೆಂಗಳೂರು: ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಮತ್ತೆ ಅಧಿಕಾರ ನೀಡಿ, ನಗರದ ಎಲ್ಲಾ ಕೆರೆಗಳ ನಿರ್ವಹಣೆ ಮಾಡುವ ಅಧಿಕಾರವನ್ನು ಪ್ರಾಧಿಕಾರಕ್ಕೆ ವಹಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ ಸೂಚನೆ ನೀಡಿದರು.


COMMERCIAL BREAK
SCROLL TO CONTINUE READING

ಬಿಡಿಎ ವ್ಯಾಪ್ತಿಯಲ್ಲಿರುವ 10 ಕೆರೆಗಳನ್ನು ಬಿಬಿಎಂಪಿ ವ್ಯಾಪ್ತಿಗೆ ನೀಡುವ ಸಂಬಂಧ ಬಿಎಂಆರ್‌ಡಿಎ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.


ಬಿಬಿಎಂಪಿ ಹಾಗೂ ಬಿಡಿಎ ಕೆರೆಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಪ್ರತ್ಯೇಕ ಸಮಯ ಹಾಗೂ ಅನುದಾನ ಮೀಸಲಿಡಬೇಕು. ಈ ಹಿಂದೆ ಕೆರೆ ಅಭಿಪ್ರಾಧಿಕಾರ ತರಲಾಗಿತ್ತು, ಆನಂತರದ ದಿನಗಳಲ್ಲಿ ಈ ಪ್ರಾಧಿಕಾರದ ಅಧಿಕಾರವನ್ನು ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಲಾಗಿದೆ. 
ಪ್ರಸ್ತುತ ಈ ಪ್ರಾಧಿಕಾರ ಯಾವುದೇ ಚಟುವಟಿಕೆ ನಡೆಸುತ್ತಿಲ್ಲ. ಹೀಗಾಗಿ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಮೊದಲಿನ  ಅಧಿಕಾರ ವಾಪಾಸ್‌ ನೀಡುವುದಲ್ಲದೆ, ನಿರ್ವಹಣೆಯ ಜವಾಬ್ಧಾರಿ‌ ಹಾಗೂ ಇಂತಿಷ್ಟು ಅನುದಾನ ಮೀಸಲಿಟ್ಟು ಪ್ರಾಧಿಕಾರಕ್ಕೆ ಮರುಹುಟ್ಟು ನೀಡಬೇಕಿದೆ. ಕೆಲವೇ ತಿಂಗಳಲ್ಲಿ ಪ್ರಾಧಿಕಾರವನ್ನು ಪುನರ್‌ ರಚಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.


ಅಲ್ಲಿಯವರೆಗೂ ಬಿಡಿಎ ವ್ಯಾಪ್ತಿಯ 10 ಕೆರೆಗಳನ್ನು ಬಿಬಿಎಂಪಿಗೆ ಹಸ್ತಾಂತರಿಸದೇ ತನ್ನಲ್ಲಿಯೇ ಇಟ್ಟುಕೊಳ್ಳುವಂತೆ ಡಿಸಿಎಂ ಸೂಚಿಸಿದರು.


ಇದಕ್ಕೂ ಮುನ್ನ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸವಿರುವ ನಿವೇಶನ ರಹಿತ ಎಸ್‌ಸಿ- ಎಸ್‌ಟಿ ಸಮುದಾಯದ ಬಡವರಿಗೆ ನಿವೇಶನ ಮಂಜೂರು ಮಾಡುವ ಸಂಬಂಧ ಚರ್ಚಿಸಲಾಯಿತು. ಖಾಲಿ ನಿವೇಶನ ಗುರುತಿಸಿ, ಕೂಡಲೇ ಈ ಪ್ರಸ್ತಾವವನ್ನು ಸಚಿವ ಸಂಪುಟದಲ್ಲಿ ಮುಂದಿಟ್ಟು ಒಪ್ಪಿಗೆ ಪಡೆದುಕೊಳ್ಳಲಾಗುವುದು ಎಂದರು. 


ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬಿಡಿಎ ಆಯುಕ್ತೆ ಮಂಜುಳ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.