ಬೆಂಗಳೂರು: ಕೈಗಾರಿಕೆಗಳಿಗೆ ಸಂಬಂಧಿಸಿದಂತೆ 61ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯು ಫಾಕ್ಸ್‌ಕಾನ್ ಸೇರಿದಂತೆ 75,393.57 ಕೋಟಿ ರೂ. ಮೊತ್ತದ 18 ಯೋಜನೆಗಳಿಗೆ ಅನುಮೋದನೆ ನೀಡಿದೆ.


COMMERCIAL BREAK
SCROLL TO CONTINUE READING

ಫಾಕ್ಸ್‌ಕಾನ್ ಹಾನ್ ಹೈ ಟೆಕ್ನಾಲಜಿ ಇಂಡಿಯಾ ಮೆಗಾ ಡೆವಲಪ್ ಮೆಂಟ್ ಪ್ರೈ.ಲಿ. (ಎಫ್ ಎಚ್ ಎಚ್) 50 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ  8,000 ಕೋಟಿ ರೂ. ವೆಚ್ಚದ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡಲಾಗಿದೆ. 15 ದಿನಗಳ ಹಿಂದೆ ಫಾಕ್ಸ್‌ಕಾನ್ ಸಿಇಒ ಮತ್ತು ಅಧ್ಯಕ್ಷ ಯಂಗ್ ಲಿಯು ನೇತೃತ್ವದ ನಿಯೋಗ ರಾಜ್ಯಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಿತ್ತು.


ಇದನ್ನೂ ಓದಿ: Sarcasm Aadhaar Card: ಉರಿಗೌಡ ನಂಜೇಗೌಡರ ಹೆಸರಿನಲ್ಲಿ ಸೃಷ್ಠಿಯಾಯಿತು ವ್ಯಂಗ್ಯ ಆಧಾರ್ ಕಾರ್ಡ್ 


ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಫಾಕ್ಸ್‌ಕಾನ್ ಸೇರಿದಂತೆ 10 ಹೊಸ ಯೋಜನೆಗಳು, 5 ವಿಸ್ತರಣೆ ಯೋಜನೆಗಳು ಮತ್ತು 3 ಹೆಚ್ಚುವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ 18 ಯೋಜನೆಗಳಿಂದ 77,606 ಜನರಿಗೆ ಉದ್ಯೋಗಾವಕಾಶ ನಿರೀಕ್ಷಿಸಲಾಗಿದೆ.


ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಗ್ರೀನ್ ಹೈಡ್ರೋಜನ್, ಎಥೆನಾಲ್ ಉತ್ಪಾದನೆ, ಪವನ ವಿದ್ಯುತ್ ಸ್ಥಾವರ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಜೋಡಣೆ, ಲೀಥಿಯಂ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ವಾಹನಗಳು, ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳ ಪ್ರಸ್ತಾವನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ," ಎಂದರು.


"ರಾಜ್ಯಕ್ಕೆ ಇಷ್ಟು ದೊಡ್ಡ ಮೊತ್ತದ ಬಂಡವಾಳ ಹರಿದುಬಂದಿರುವುದು ಸಂತಸ ತಂದಿದೆ. ಈ ಯೋಜನೆಗಳು ರಾಜ್ಯದ ಕೈಗಾರಿಕಾ ಪ್ರಗತಿಗೆ ಮತ್ತಷ್ಟು ವೇಗ ನೀಡಲಿದೆ. ರಾಷ್ಟ್ರದ ಉತ್ಪಾದನಾ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಗಮನಾರ್ಹವಾಗಿದೆ," ಎಂದು ಸಂತಸ ವ್ಯಕ್ತಪಡಿಸಿದರು.


ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್. ನಿರಾಣಿ ಮಾತನಾಡಿ, "ಹೂಡಿಕೆ ಪ್ರಸ್ತಾವನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಉದ್ಯಮ ಸ್ನೇಹಿ ನೀತಿಗಳು ಮತ್ತು ಉದ್ಯಮಗಳಿಗೆ ಪೂರಕ ಪರಿಸರ ವ್ಯವಸ್ಥೆಗೆ ಈ ಹೂಡಿಕೆಗಳು ಸಾಕ್ಷಿಯಾಗಿವೆ. ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ," ಎಂದು ತಿಳಿಸಿದರು.


"ನವೀಕರಿಸಬಹುದಾದ ಇಂಧನ, ಎಥೆನಾಲ್, ಗ್ರೀನ್ ಹೈಡ್ರೋಜನ್ ಉತ್ಪಾದನೆ, ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಇಎಸ್ ಡಿಎಂ) ಕ್ಷೇತ್ರವನ್ನು ಉತ್ತೇಜಿಸಲು ಆಂಪ್ಲಸ್ ಆ್ಯಕ್ಟಿವ್ ಪ್ರೈ.ಲಿ., ಆಯನ ರಿನೀವೇಬಲ್ ಪವರ್ ಸಿಕ್ಸ್ ಪ್ರೈ.ಲಿ., ವಿಶ್ವರಾಜ್ ಶುಗರ್ ಇಂಡಸ್ಟ್ರೀಸ್‌ ಲಿ., ಟಾಟಾ ಅಡ್ವಾನ್ಸ್ ಡ್ ಸಿಸ್ಟಮ್ ಲಿ. ಮುಂತಾದ ಕಂಪನಿಗಳ ಪ್ರಸ್ತಾವನೆಗಳನ್ನು ಅನಿಮೋದಿಸಲಾಗಿದೆ," ಎಂದು ಹೇಳಿದರು.


ಕಬ್ಬು ಬೆಳೆಯುವುದರಲ್ಲಿ ದೇಶದಲ್ಲಿ 3ನೇ ಅತಿ ದೊಡ್ಡ ರಾಜ್ಯವಾಗಿರುವ ಕರ್ನಾಟಕದಲ್ಲಿ ಎಥೆನಾಲ್ ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ ಎಂದು ಹೇಳಿದ ಅವರು, ಸಭೆಯಲ್ಲಿ ಹಸಿರು ಇಂಧನಕ್ಕೆ ಸಂಬಂಧಿಸಿದ ಹೂಡಿಕೆಗಳನ್ನು ಅನುಮೋದಿಸಿರುವುದು ಖುಷಿ ತಂದಿದೆ ಎಂದರು.


ಇದನ್ನೂ ಓದಿ: ಚುನಾವಣಾ ವಿಷಯವಾಗಿದ್ದ "ಉರಿ/ನಂಜೇ ಗೌಡ" ಸಮುದಾಯದ ಕೆಂಗಣ್ಣಿಗೆ ಕಾರಣವಾಯಿತಾ?


ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಆರ್.ಗಿರೀಶ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರಯ್ಯ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.