ಮಂಗಳೂರಿನ ದೀಪಕ್ ರಾವ್ ಹತ್ಯೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ, ರಾಜ್ಯ ಸರ್ಕಾರ ಕೋಮುಗಲಭೆಗೆ ಅವಕಾಶ ಕೊಟ್ಟಿಲ್ಲ, ಮುಂದೆಯೂ ಕೊಡಲ್ಲ. ರಾಜ್ಯದಲ್ಲಿ ನಾಲ್ಕೂವರೆ ವರ್ಷ ರಾಜ್ಯ ಸರ್ಕಾರದ ವಿರುದ್ಧ ಏನಾದರೂ ಆರೋಪ ಮಾಡಬೇಕೆಂದು ಬಿಜೆಪಿಯವರು ಏನೇನೋ‌ ಹುಡುಕಿದ್ದಾರೆ. ಬೇರೆ ಯಾವ ವಿಷಯ ಇಲ್ಲದಿರುವುದರಿಂದ ಕೋಮು ವಿಷಯ ಕೆದಕುತ್ತಿದ್ದಾರೆ ಎಂದು ಬಿಜೆಪಿಗೆ ಚಾಟಿ ಬೀಸಿದ್ದಾರೆ.


COMMERCIAL BREAK
SCROLL TO CONTINUE READING

ಅಶೋಕ್ ಸಿಎಂ ಮೇಲೆ‌ ಮಾಡಿರುವ ಡಿ-ನೋಟಿಫಿಕೇಶನ್ ಆರೋಪ ನಿರಾಧಾರ...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಡಿ-ನೋಟಿಫಿಕೇಶನ್ ಗೆ ಸಂಬಂಧಿಸಿದಂತೆ ಮಾಜಿ ಸಚಿವ ಆರ್. ಅಶೋಕ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ರೇವಣ್ಣ, ರಾಜ್ಯಕ್ಕೆ ಅಮಿತ್ ಶಾ ಬಂದುಹೋದ ನಂತರ ಪ್ರಚೋದನೆ‌ ಹೆಚ್ಚಾಗುತ್ತಿದೆ. ಈ ಹಿಂದೆ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಮಾಡುತ್ತಿದ್ದ ಕೆಲಸವನ್ನು ಈಗ ಅಶೋಕ್ ಮಾಡುತ್ತಿದ್ದಾರೆ ಎಂದು ಹೇಳಿದರು.


ಮುಂದುವರೆದು ಮಾತನಾಡಿದ ಅವರು ಮಾರ್ಕೊಪೋಲ್ ಬಸ್ ಖರೀದಿಯ ಫೈಲ್ ಬಂದಿದೆ. ಅದರ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ. ಮಾಜಿ ಸಾರಿಗೆ ಸಚಿವ ಆರ್. ಅಶೋಕ್ ಅಕ್ರಮದ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ವಾರದೊಳಗೆ ಅಶೋಕ್ ಅಕ್ರಮವನ್ನು ಬಯಲಿಗೆಳೆಯುತ್ತೇವೆ. ಮಾಜಿ ಸಚಿವ ಆರ್. ಅಶೋಕ್ ಗಾಜಿನಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.