900 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಮುಂದಾಗಿದೆ ರಾಜ್ಯ ಸರ್ಕಾರ
ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತಲೆದೂರಿರುವ ಹಿನ್ನೆಲೆಯಲ್ಲಿ ಈ ಬಾರಿ 900 ಮೆಗಾವ್ಯಾಟ್ ವಿದ್ಯುತ್ ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ರಾಜ್ಯದಲ್ಲಿ ಗಣನೀಯ ಪ್ರಮಾಣದ ವಿದ್ಯುತ್ ಸಮಸ್ಯೆಯಾಗುತ್ತಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ.
ಈ ಬಗ್ಗೆ ವಿಧಾನಸಭೆಯಲ್ಲಿ ಮಾಹಿತಿ ನೀಡಿರುವ ರಾಜ್ಯದ ಇಂಧನ ಇಲಾಖೆ, ವಿದ್ಯುತ್ ಸಮಸ್ಯೆ ಪರಿಹಾರಕ್ಕಾಗಿ ಬರೋಬ್ಬರಿ ಬರೋಬ್ಬರಿ 900 ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದೆ. ಆಂಧ್ರಪ್ರದೇಶದ ಗ್ಲೋಬಲ್ ಎನರ್ಜಿ ಪ್ರೈ ಲಿಮಿಟೆಡ್ ಮತ್ತು ಸೆಂಬ್ ಕಾರ್ಪ್ ಗಾಯತ್ರಿ ಪವರ್ ಲಿಮಿಟೆಡ್ ನಿಂದ 500 ಮೆ ವ್ಯಾಟ್, ಜಿಂದಾಲ್ ನಿಂದ 200 ಮೆ ವ್ಯಾ, ಮಧ್ಯಪ್ರದೇಶದ ಜೆ.ಪಿ.ವಿ.ಎಲ್ ನಿಂದ 100 ಮೆಗಾವ್ಯಾಟ್ ಮತ್ತು ರಾಜಸ್ತಾನದ ಶ್ರೀ ಸಿಮೆಂಟ್ ಲಿಮಿಟೆಡ್ ನಿಂದ 100 ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಪ್ರತಿ ಯುನಿಟ್ ಗೆ 4 ರೂಪಾಯಿ 8 ಪೈಸೆ ದರದಲ್ಲಿ ವಿದ್ಯುತ್ ಖರೀದಿ ಮಾಡಲಾಗುತ್ತಿದ್ದು, ಕಳೆದ ಬಾರಿಯ ವಿದ್ಯುತ್ ದರಕ್ಕೆ ಹೋಲಿಸಿದರೆ 29 ಪೈಸೆಯಷ್ಟು ಕಡಿಮೆ ಅಂತ ಸರ್ಕಾರ ಕೊಟ್ಟಿರುವ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.
ವಿಧಾನಸಭೆಯಲ್ಲಿ ಶಾಸಕ ಬಸವರಾಜ್ ಬೊಮ್ಮಾಯಿ ಮತ್ತು ವೈ.ಎಸ್.ವಿ.ದತ್ತಾ ಕೇಳಿದ ಪ್ರಶ್ನೆಗೆ ಇಂಧನ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಲಿಖಿತ ಉತ್ತರ ನೀಡೋ ಮೂಲಕ ರಾಜ್ಯದ ವಿದ್ಯುತ್ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದಾರೆ.