ರಾಜ್ಯದಲ್ಲಿರುವುದು ಪಿಕ್ ಪಾಕೆಟ್ ಸರ್ಕಾರ; ಕಾಂಗ್ರೆಸ್’ನಿಂದ ದಲಿತರಿಗೆ ಅನ್ಯಾಯ ತಪ್ಪಿದ್ದಲ್ಲ: ಹೆಚ್ ಡಿ ಕುಮಾರಸ್ವಾಮಿ
HD Kumaraswamy: ಮಧುಗಿರಿಯಲ್ಲಿ ತುಮಕೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಅವರ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ತುಮಕೂರು (ಮಧುಗಿರಿ): ಒಂದು ಕೈಯ್ಯಲ್ಲಿ ಕೊಟ್ಟ ಹಾಗೆ ಕೊಟ್ಟು ಇನ್ನೊಂದು ಕೈಯ್ಯಲ್ಲಿ ಕಿತ್ತುಕೊಳ್ಳುತ್ತಿರುವ ಈ ಸರ್ಕಾರಕ್ಕೆ ಆತ್ಮಸಾಕ್ಷಿ ಎನ್ನುವುದೇ ಇಲ್ಲ. ಅದಕ್ಕೆ ಈ ಸರಕಾರದ ಗ್ಯಾರಂಟಿಗಳನ್ನು ಪಿಕ್ ಪಾಕೆಟ್ ಗ್ಯಾರಂಟಿಗಳು ಎಂದು ನಾನು ಕರೆದದ್ದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಅಲ್ಲದೆ, ರಾಜ್ಯದಲ್ಲಿ 'ಪಿಕ್ ಪಾಕೆಟ್ ಸರ್ಕಾರ' ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಮಧುಗಿರಿಯಲ್ಲಿ ತುಮಕೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಅವರ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಾನು ಹಿಂದೆ ಎರಡು ಬಾರಿ ಸರಕಾರ ನಡೆಸಿದ್ದೇನೆ. ಜನರಿಗೆ ಏನೆಲ್ಲಾ ಕೊಡುಗೆ ಕೊಟ್ಟಿದ್ದೇನೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ವಿಧವಾ ತಾಯಂದಿರಿಗೆ 400 ರೂಪಾಯಿ ಮಾಶಾಸನ, ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಸೈಕಲ್ ಕೊಟ್ಟಿದೇನೆ.ಗ್ರಾಮ ವಾಸ್ತವ್ಯಕ್ಕೆ ಬಂದಾಗ ತಾಯಂದಿರು ಸಾರಾಯಿ, ಲಾಟರಿ ನಿಷೇಧ ಮಾಡಿ ಎಂದು ಒತ್ತಾಯ ಮಾಡಿದರು. ಅವರ ಮಾತಿಗೆ ಬೆಲೆ ಕೊಟ್ಟು ನಾನು ಸರಕಾರದ ಖಜಾನೆಗೆ ನಷ್ಟ ಆಗುತ್ತದೆ ಎಂದು ಗೊತ್ತಿದ್ದರೂ ಸಾರಾಯಿ, ಲಾಟರಿ ನಿಷೇಧ ಮಾಡಿದ್ದೇನೆ. ಅಂತಹ ನಾನು ತಾಯಂದಿರಿಗೆ ಅವಮಾನ ಮಾಡುತ್ತೇನೆಯೇ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕೆಟ್ಟ ಸರಕಾರ ಇದೆ. ಐದು ಗ್ಯಾರೆಂಟಿ ಅಂತಾ ಹೇಳ್ತಾರಲ್ಲ, ನಿಮ್ಮೆಲ್ಲ ತಾಯಂದಿರಿಗೆ ನಾನು ಕೈ ಜೋಡಿಸಿ ಮನವಿ ಮಾಡುತ್ತೇನೆ. ನಿಮಗೆ ಕೊಡ್ತಿರೋ 2000 ಇದ್ಯಲ್ಲಾ, ಅದಕ್ಕಾಗಿ ನಿಮ್ಮ ಕುಟುಂಬದ ಮೇಲೆ ಮುಂದೆ ಯಾವ ಹೊರೆ ತಂದಿಡುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಈ ಸರಕಾರವು ನಮ್ಮ ರಾಜ್ಯವನ್ನು ಸಾಲದ ಹೊರೆಗೆ ಒಯ್ದು ನಿಲ್ಲಿಸುತ್ತಿದೆ. ಒಂದು ಕುಟುಂಬದ ಮೇಲೆ 36,000 ರೂಪಾಯಿ ಸಾಲ ಮಾಡಿ ನಿಲ್ಲಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಸರ್ಕಾರ ಪಿಕ್ ಪಾಕೆಟ್ ಮಾಡುತ್ತಿದೆ!
ಈ ಸರಕಾರ ರಾಜ್ಯದಲ್ಲಿ ಮದ್ಯ ವ್ಯಸನಿಗಳ ಸಖ್ಯೆಯನ್ನು ಹೆಚ್ಚಿಸುತ್ತಿದೆ. ಹಿಂದೆ ಸಂಜೆ ಸ್ನೇಹಿತರ ಜತೆ ಹೊರಗಡೆ ಹೋದರೆ 25-50 ರೂಪಾಯಿಯಲ್ಲಿ ಮುಗಿದುಹೋಗುತ್ತಿತ್ತು. ಈಗ ಒಂದು ಕ್ವಾರ್ಟರ್ ಗೆ 250 ರೂಪಾಯಿ ಆಗಿದೆ. ಜತೆಗೆ ಮಾರ್ಗದರ್ಶಿ ಮೌಲ್ಯ, ಮುದ್ರಾಂಕ ಶುಲ್ಕ ಸೇರಿ ಎಲ್ಲಾ ದರಗಳನ್ನು ಹೆಚ್ಚಳ ಮಾಡಿದೆ. ಇದು ಒಂದು ರೀತಿಯ ಪಿಕ್ ಪಾಕೆಟ್ ಸರ್ಕಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಎನ್ ಡಿಎ ಸರಕಾರ ಬಂದರೆ ಸಂವಿಧಾನವನ್ನೇ ರದ್ದು ಮಾಡುತ್ತಾರೆ ಎಂದು ನಂಬಿಸುತ್ತಿದ್ದಾರೆ. ಇದು ಸುಳ್ಳು. ಅದನ್ನು ದಲಿತ ಯುವಕರು ನಂಬಬಾರದು. ಅಂಬೇಡ್ಕರ್ ಅವರು ನಿಧನರಾದಾಗ ಅವರನ್ನು ಸಮಾಧಿ ಮಾಡುವುದಕ್ಕೂ ಕಾಂಗ್ರೆಸ್ ನವರು ಜಾಗ ಕೊಡಲಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಮಲ್ಲಿಕಾರ್ಜುನ ಖರ್ಗೆ ಏನೋ ಆಗಿಬಿಡುತ್ತಾರೆ ಎಂದು ನಂಬಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮೇಲೆ ಟೀಕಾಪ್ರಹಾರ ನಡೆಸಿದರು.
ಈ ಚುನಾವಣೆ ಮುಗಿದ ಮೇಲೆ ಮಲ್ಲಿಕಾರ್ಜುನ ಖರ್ಗೆ ಅವರು ಖಾಲಿ ಕೈಯಲ್ಲಿ ಕರ್ನಾಟಕಕ್ಕೆ ಬರಬೇಕಾಗುತ್ತದೆ. ಅಂಬೇಡ್ಕರ್ ಅವರನ್ನೇ ಬಿಡದ ಕಾಂಗ್ರೆಸ್ ನವರು ಖರ್ಗೆ ಅವರನ್ನು ಬಿಡುತ್ತಾರೆಯೇ? ಅವರು ಪಕ್ಷಕ್ಕೆ ಇಷ್ಟೆಲ್ಲಾ ದುಡಿದಿದ್ದಕ್ಕೆ ಇನ್ನೂ ಅವರು ತ್ಯಾಗ ಮಾಡಿಕೊಂಡೇ ಹೋಗಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಸಿದ್ದರಾಮಯ್ಯ ಅವರು ಈಗ ಭಾಷಣ ಮಾಡುತ್ತಿದ್ದಾರೆ. ಆದರೆ 2013ರಲ್ಲಿ ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್ ಅವರು ಗೆದ್ದರೆ ತಮಗೆ ಕಷ್ಟ ಆಗುತ್ತದೆ ಎಂದು ಅವರನ್ನೇ ಸೋಲಿಸೋಕೆ ಏನೇನು ಮಾಡಿದರು ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಇದು ದಲಿತ ಸಮುದಾಯಕ್ಕೆ ಮಾಡಿರುವ ಅನ್ಯಾಯ ಅಲ್ಲವಾ? ಎಂದು ಕಿಡಿಕಾರಿದರು ಅವರು.
ಮಧುಗಿರಿಯಲ್ಲಿ ಶಾಸಕನ ರೌಡಿಸಂ
ಇಲ್ಲಿನ ಡಿಸಿಸಿ ಬ್ಯಾಂಕ್ ಅನ್ನು ಇವರ ಅಪ್ಪನ ಮನೆ ಆಸ್ತಿ ಮಾಡಿಕೊಂಡುಬಿಟ್ಟಿದ್ದಾರೆ. ಅವರಿಗೆ ಯಾರಿಗೆ ಬೇಕೋ ಅವರಿಗೆ ಸಾಲ ಕೊಟ್ಟಿದ್ದಾರೆ. ಬೇಡ ಅಂದೋರಿಗೆ ಸಾಲ ಇಲ್ಲ. ಹಾಗೆ ಮಾಡಿಕೊಂಡು ಓಟು ಹಾಕಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಅಪ್ಪನ ದೌರ್ಜನ್ಯ ಆಯಿತು, ಈಗ ಮಗ ಶುರು ಮಾಡಿಕೊಂಡಿದ್ದಾನೆ ಎಂದು ಕೇಳಿದ್ದೇನೆ. ಅಧಿಕಾರಿಗಳಿಗೆ, ಪೊಲೀಸರಿಗೆ ನಾನು ಮನವಿ ಮಾಡುತ್ತೇನೆ. ಇಲ್ಲಿನ ರೌಡಿ ಶಾಸಕನ ಪರವಾಗಿ ಕಾನೂನು ಮೀರಿ ಅವರ ಪರವಾಗಿ ಕೆಲಸ ಮಾಡಬೇಡಿ. ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ. ಇಲ್ಲೇನು ರೌಡಿಸಂ, ಗುಂಡಾಗಿರಿ ನಡೆಸುತ್ತಿದ್ದೀರಿ.. ಕಾಲಚಕ್ರ ಉರುಳುತ್ತಿದೆ. ಈ ರೌಡಿಸಂಗೆ ಬೆಂಬಲ ಕೊಡವವರು ಪ್ರಾಯಶ್ಚಿತ ಪಡುವ ದಿನ ದೂರವಿಲ್ಲ ಎಂದು ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ ಹೆಸರು ಹೇಳಿಕೊಂಡು ಬರುವವರನ್ನು ದಯಮಾಡಿ ನಂಬಬೇಡಿ. ದೇವೇಗೌಡರನ್ನು ಗೆಲ್ಲಿಸಿದರೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿಯೂ ನೀರು ಬರುತ್ತಿತ್ತು. ಆದರೆ, ಅವರನ್ನ ಸೋಲಿಸಿದ್ದರಿಂದ ಅವರು ಆರೋಗ್ಯ ಹಾಳಾಗುವಂತೆ ಆಯಿತು. ಮಧುಗಿರಿಗೂ ದೇವೇಗೌಡರ ಕುಟುಂಬಕ್ಕೂ ಯಾವುದೋ ಒಂದು ಜನ್ಮದ ಋಣಾನುಬಂದ ಇದೆ ಎಂದು ಮಾಜಿ ಮುಖ್ಯಮಂತ್ರಿಗಳು ಭಾವುಕರಾಗಿ ನುಡಿದರು.
ದೇಶಕ್ಕೆ ಒಂದು ಸುಭದ್ರವಾದ ಸರ್ಕಾರ ಬೇಕಿದೆ. ಕಳೆದ ಹತ್ತು ವರ್ಷಗಳಿಂದ ಸಮರ್ಥ ನಾಯಕತ್ವ, ಸರ್ಕಾರ ಇದೆ. ಮೋದಿ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದ ಅವರು; ತುಮಕೂರಿನಲ್ಲಿ 6ನೇ ವಿಧಾನಸಭಾ ಕ್ಷೇತ್ರ ಮಧುಗಿರಿಗೆ ನಾನು ಬಂದಿದ್ದೇನೆ. ಸೋಮಣ್ಣ ಅವರು ಗೆದ್ದರೆ ಈ ಭಾಗದ ಸಮಸ್ಯೆಗಳು ಶಾಶ್ವತವಾಗಿ ಪರಿಹಾರ ಕಾಣುತ್ತವೆ ಎಂದು ಕುಮಾರಸ್ವಾಮಿ ಅವರು ಭರವಸೆ ನೀಡಿದರು.
ಇದನ್ನೂ ಓದಿ: ಲೈವ್ ಪಂದ್ಯದಲ್ಲೇ ಮೋಸದಾಟವಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಿಷಬ್ ಪಂತ್!
ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಅವರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಮಾಜಿ ಶಾಸಕರಾದ ವೀರಭದ್ರಯ್ಯ, ಬಿಜೆಪಿ ನಾಯಕರಾದ ಅನಿಲ್ ಕುಮಾರ್, ಮಧುಗಿರಿ ಬಿಜೆಪಿ ಸಂಘಟನಾತ್ಮಕ ಜಿಲ್ಲೆಯ ಅಧ್ಯಕ್ಷ ಹನುಮಂತೇಗೌಡ ಸೇರಿದಂತೆ ಜೆಡಿಎಸ್ ಬಿಜೆಪಿ ಪಕ್ಷದ ಅನೇಕ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ